ಗ್ಯಾಪ್‌ನಲ್ಲಿ ಗೋಲ್ ಹೊಡೆಯುವ ಎಚ್‌ಡಿಕೆ: ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ವ್ಯಂಗ್ಯ

Cong
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿಯೂ ಗ್ಯಾಪ್‌ನಲ್ಲಿ ಗೋಲ್ ಹೊಡೆದು ಮುಖ್ಯಮಂತ್ರಿಯಾದರು. ಅವರು ಎಷ್ಟೇ ಪರಿಣಿತರಾಗಿದ್ದರೂ ಮತ್ತೆ ಅದೇ ರೀತಿ ಗ್ಯಾಪ್‌ನಲ್ಲಿ ಗೋಲ್ ಹೊಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಟಾಂಗ್ ನೀಡಿದರು.

ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕಲಿಗ ಸಮುದಾಯದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಕುಮಾರಸ್ವಾಮಿ ಅವರು ಸಂತೋಷಗೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದವರನ್ನು ಸಿಎಂ ಮಾಡಿ ಎಂದು ಮನವಿ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದನ್ನು ಎಚ್‌ಡಿಕೆ ತಪ್ಪಾಗಿ ಗ್ರಹಿಸಿ ಸಂತೋಷಪಡುವ ಜತೆಗೆ ಇದೇ ಅವಕಾಶವನ್ನು ಬಳಸಿಕೊಂಡು ಮತ್ತೆ ಹಿಂದಿನ ರೀತಿಯಲ್ಲಿ ಗೋಲ್ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಬಾರಿ ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ಜರಿದರು.

ಒಕ್ಕಲಿಗರು ಕೇವಲ ಎಚ್‌ಡಿಕೆಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಈ ಬಾರಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರ್ಕಾರ ಬಂದ ನಂತರ ಹೈಕಮಾಂಡ್ ಯಾರನ್ನು ಸಿಎಂ ಎಂದು ಸೂಚಿಸುತ್ತದೆಯೋ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಬಿಜೆಪಿಯವರು ಈವರೆಗೆ ಜನರಿಂದ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚನೆ ಮಾಡಿಲ್ಲ. ಮೈತ್ರಿ ಸರ್ಕಾರ ಅಥವಾ ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದಾರೆ. ರಾಜ್ಯದ ಜನತೆ ಎಂದೂ ಬಿಜೆಪಿಯನ್ನು ಬಯಸಿಲ್ಲ, ಮುಂದೆಯೂ ಬಯಸಲ್ಲ ಎಂದರು.

ರಾಜ್ಯ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ವಿಶ್ವ, ಕಾರ್ಯದರ್ಶಿ ಐಶ್ವರ್ಯಾ ಮಹದೇವ್, ಮುಖಂಡ ಸಚಿನ್ ಚಲುವರಾಯಸ್ವಾಮಿ ಮತ್ತಿತರಿದ್ದರು.

--------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net