ಇಂದು ಸಚಿವ ಎಚ್‌ಡಿಕೆ ಜನತಾದರ್ಶನ: ನಗರದ ಅಂಬೇಡ್ಕರ್ ಭವನದಲ್ಲಿ ವೇದಿಕೆ ಸಜ್ಜು

HDK Janatadarshan today Mandya
Published on

ಮಂಡ್ಯ: ಕೇಂದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜು.5ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜನತಾದರ್ಶನ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಎಚ್‌ಡಿಕೆ ಅವರು ಸಿಎಂ ಆಗಿದ್ದ ವೇಳೆ ಮಾಡಿದ್ದ ಜನತಾದರ್ಶನ ಸಾಕಷ್ಟು ಖ್ಯಾತಿ ಪಡೆದುಕೊಂಡಿತ್ತು. ಮಾತ್ರವಲ್ಲದೆ ಹಲವು ಸಮಸ್ಯೆಗಳು ಬಗೆಹರಿದಿದ್ದವು. ಈ ಹಿನ್ನೆಲೆಯಲ್ಲಿ ಜನತಾದರ್ಶನದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಮಂಡ್ಯ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಂದಲೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ.

ಅಂಬೇಡ್ಕರ್ ಭವನದಲ್ಲಿ ಪರಿಶೀಲನೆ ನಡೆಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಮಂಡ್ಯದಲ್ಲಿ ಜನತಾ ದರ್ಶನ ನಡೆಸುತ್ತಿದ್ದಾರೆ. ಬೆಳಗ್ಗೆ 10ಗಂಟೆಯಿಂದ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ. ಸಂಜೆಯವರೆಗೂ ಕಾರ್ಯಕ್ರಮ ಇರಲಿದೆ. ಜನಸಾಮಾನ್ಯರ ಜತೆ ಇದ್ದು ಸಮಸ್ಯೆ ಆಲಿಸಲಿದ್ದಾರೆ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದಾರೆ. ಜನರ ನೀರಿಕ್ಷೆಯನ್ನ ಈಡೇರಿಸುವ ಕೆಲಸ ಮಾಡುತ್ತಾರೆ. ದೇಶದ ಕೆಲಸದ ಜತೆಗೆ ಮಂಡ್ಯದ ಜನರ ಋಣ ತೀರಿಸುವ ಅವಕಾಶ ಅವರಿಗೆ ಲಭಿಸಿದೆ. ನೂರಕ್ಕೆ ನೂರರಷ್ಟು ಜಿಲ್ಲೆಯ ಅಭಿವೃದ್ದಿಯನ್ನು ಸಹಕಾರ ಮಾಡುತ್ತಾರೆ ಎಂದರು.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವಿಚಾರವಾಗಿ ಮಾತನಾಡಿದ ಸಿ.ಎಸ್.ಪುಟ್ಟರಾಜು, ನಮ್ಮೆಲ್ಲರ ಬೆನ್ನೆಲುಬು ಕನ್ನಂಬಾಡಿ ಅಣೆಕಟ್ಟೆ. ಅದರ ಸುರಕ್ಷತೆಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದಿಯೋ ಅದರ ಪರ ನಾವು ಇರುತ್ತೇವೆ. ಅದರ ಬಗ್ಗೆ ವಿಶ್ಲೇಷಣೆ ಮಾಡಲ್ಲ. ಕನ್ನಂಬಾಡಿ ಅಣೆಕಟ್ಟೆ ಸುರಕ್ಷಿತೆ ಮುಖ್ಯ. ಜಿಲ್ಲಾಡಳಿತ ಕಾನೂನು ಬದ್ದವಾಗಿ ಸುರಕ್ಷತೆಯ ಜವಾಬ್ದಾರಿ ಹೊತ್ತಿದೆ. ಅವರ ಜತೆ ನಾವು ಇರುತ್ತೇವೆ. ಕುಮಾರಣ್ಣ ಅವರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ಕೊಡುತ್ತಾರೆ ಎಂದು ಹೇಳಿದರು.

ಇನ್ನು ಜಿಲ್ಲೆಯ ರೈತರ ಹಿತದೃಷ್ಟಿಯಿಂದ ತಕ್ಷಣವೇ ನಾಲೆಗಳಿಗೆ ನೀರು ಹರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎಚ್‌ಡಿಕೆ ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಯಾವುದೇ ಮುಲಾಜಿಲ್ಲದೆ ನೀರು ಬಿಡುವ ಕೆಲಸವಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಹಗರಣದ ಬಗ್ಗೆ ಮಾಹಿತಿ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಯಾರು ದೊಡ್ಡವರಲ್ಲ. ಯಾರೇ ಇದರಲ್ಲಿ ತಪ್ಪು ಮಾಡಿದ್ದರೂ ಕ್ರಮವಾಗುತ್ತದೆ. ಈ ವಿಚಾರದಲ್ಲಿ ಕಾನೂನು ಬದ್ಧವಾಗಿ ನಾವು ಬಿಜೆಪಿ ಜತೆ ಸೇರಿ ವಿರೋಧ ಪಕ್ಷದವರಾಗಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net