

ಮೈಸೂರು: ಕೀಳನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಲೆಯೊಂದಕ್ಕೆ ಸಿಎಸ್‌ಆರ್ ಹಣ ಬಿಡುಗಡೆ ಸಂಬಂಧ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ತನ್ನ ತಂದೆ ಸಿಎಂ ಸಿದ್ದರಾಮಯ್ಯ ಅವರೊಡನೆ ಮಾತನಾಡಿರುವುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಸ್.ಮಂಜುನಾಥ್ ಆರೋಪಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಲು ಯತೀಂದ್ರ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ವೇಳೆ ಕೆಲವು ಗ್ರಾಮಸ್ಥರು ತಮ್ಮ ಗ್ರಾಮದ ಶಾಲೆ ದುರಸ್ತಿ ಮಾಡಿಸಿಕೊಡಲು ಕೋರಿದರು. ಈ ವೇಳೆ ಯತೀಂದ್ರ ಅವರು ತಂದೆಯೊಡನೆ ಮಾತನಾಡುತ್ತ, ಬಿಇಒ ನೀಡಿದ ಪಟ್ಟಿ ಬದಲು ತಾವು ನೀಡಿದ ಪಟ್ಟಿಯಲ್ಲಿರುವುದಕ್ಕೆ ಸಮ್ಮತಿಸಲು ಕೋರಿದರು. ಕಾರ್ಯಕ್ರಮದ ಸ್ಥಳದಲ್ಲೇ ಎಲ್ಲರ ಎದುರಿಗೆ ಮಾತನಾಡಿದ್ದಾರೆ. ಒಂದು ವೇಳೆ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದರೆ ಆ ರೀತಿ ಎಲ್ಲರೆದುರು ಮಾತನಾಡುತ್ತಿದ್ದರೇ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಯತೀಂದ್ರ ಕ್ಷೇತ್ರದ ಜನರ ಕಷ್ಟಸುಖ ಆಲಿಸುತ್ತಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರೂ ಆಗಿದ್ದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಾಗಿ, ಎಲ್ಲ ಗ್ರಾಮಗಳಿಗೂ ತೆರಳಿ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದರು.
ಮುಖಂಡರಾದ ಪಿ.ಮಹದೇವು, ರವಿ, ಮೇಗಳಾಪುರ ಸೋಮಣ್ಣ, ಪ್ರಸನ್ನ, ಶಿವಣ್ಣ, ಮಹದೇವಸ್ವಾಮಿ ಇದ್ದರು.