ರಾಜ್ಯಸರ್ಕಾರದಲ್ಲಿ ಹಣ ಕೊಡದೇ ಯಾವ ಕೆಲಸವೂ ಆಗಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

HDK
Published on

ಮಂಡ್ಯ: ರಾಜ್ಯ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ. ಆದ್ದರಿಂದ ಮುಂದಿನ ಚುನಾವಣೆ ಬರುವವರೆ ಕಾಯಬೇಕು. ಅಲ್ಲಿಯವರೆಗೂ ಯಾವುದೇ ಕೆಲಸವೂ ಹಣ ಕೊಡದೆ ಆಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲೂ ಮಧ್ಯವರ್ತಿಗಳ ಅವಶ್ಯಕತೆಯೂ ಇಲ್ಲ. ಈಗ ಸಚಿವರೇ ಎಲ್ಲ ಶುರು ಮಾಡಿಕೊಂಡಿದ್ದಾರೆ. ಅವರೇ ಹಣ ಫಿಕ್ಸ್ ಮಾಡಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಮನೆ ಎಂಬಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರೇ ಸ್ವತಃ ಆರೋಪ ಮಾಡಿದ್ದಾರೆ. ಈ ರೀತಿ ಮಾತನಾಡಿರುವುದರಲ್ಲಿ ಯಾವುದೇ ಅಚ್ಚರಿಯೂ ಇಲ್ಲ . ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದರು.

ರಾಜ್ಯಸರ್ಕಾರದ ಹಲವು ಇಲಾಖೆಗಳಲ್ಲಿ ಅನುದಾನ ಬಿಡುಗಡೆಯಾಗಲು ಶಾಸಕರೇ ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್‌ಕೊಡಿ ಹಣ ತಗೊಂಡು ಬರುತ್ತೇವೆ ಎಂದು ಹೇಳುತ್ತಾರೆ. ಶಾಸಕರ ಲೆಟರ್‌ಹೆಡ್‌ನಿಂದ ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ, ಮನೆ ತರುತ್ತಾರೆ. ನನ್ನ ಬಳಿಯೂ ಮನೆ ತರಲು ಈ ಸರ್ಕಾರದಲ್ಲಿ ಅಷ್ಟು ಕೊಟ್ಟಿದ್ದೇವೆಂದು ಚರ್ಚೆ ಮಾಡುತ್ತಾರೆ ಎಂದು ದೂರಿದರು.

ರೋಡ್ ಟನಲ್‌ನ್ನು ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಲಿ. ನೋಡೋಣ ಯಾವ ಟನಲ್ ಮಾಡುತ್ತಾರೆ. ಅವರ ಹೇಳುವ ಮಾತುಗಳು ಯಾವುದೂ ಆಗಲ್ಲ. ಈಗ 2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಎತ್ತಿನ ಹೊಳೆ ಬಂದಿಲ್ಲ. ಈಗಾಗಲೇ 14 ರಿಂದ 15 ಸಾವಿರ ಕೋಟಿ ರೂ ಲೂಟಿ ಆಗಿದೆ. 2013ರಲ್ಲಿ ಇದೇ ಸರ್ಕಾರ ಭೂಮಿ ಪೂಜೆ ಮಾಡಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡುತ್ತೇವೆ ಎಂದು ಹೇಳಿದರು. 2025 ಬಂದರೂ ಇನ್ನೂ ನೀರು ಮಾತ್ರ ಬಂದಿಲ್ಲ. ಎತ್ತಿನ ಹೊಳೆ ನೀರು ಕೊಡುತ್ತೇವೆ ಎಂದು ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯೋ ತರಕಾರಿನೂ ಯಾರೂ ಕೊಳ್ಳಬಾರದಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಕನಸು ಕಾಣಬೇಕಷ್ಟೆ. ಅವರಿಗೆ ಸಿಎಂ ಹುದ್ದೆಯನ್ನು ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟುಕೊಡುತ್ತಾರೆ. ನಮ್ಮ ಕೈಯ್ಯಲ್ಲಿ ಏನೂ ಇಲ್ಲ. ಅದೆಲ್ಲವೂ ಆ ಭಗವಂತನ ಕೈಯ್ಯಲ್ಲಿದೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net