ರಾಜ್ಯಸರ್ಕಾರದ ಅಕ್ರಮ ಟನ್‌ಗಟ್ಟಲೇ ದಾಖಲೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

HDK criticizes the state government Mandya
Published on

ಮಂಡ್ಯ: ರಾಜ್ಯಸರ್ಕಾರದ ಅಕ್ರಮಗಳ ಬಗ್ಗೆ ಟನ್‌ಗಟ್ಟಲೆ ದಾಖಲೆಗಳಿವೆ. ಯಾವ ರೀತಿಯ ದಾಖಲೆಗಳಿಟ್ಟರೂ ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯಸರ್ಕಾರದ ಅಧಿಕಾರ ದುರುಪಯೋಗದ ಬಗ್ಗೆ ದಾಖಲೆಗಳಿವೆ. ಹಾಗಾಗಿ ನನ್ನ ಮೇಲೆ ಯುದ್ಧ ಶುರು ಮಾಡಿದ್ದಾರೆ. ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನ ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ. ನಮ್ಮದು ಬಂದೂಕು ಸಂಸ್ಕೃತಿಯಲ್ಲ, ಬದಲಿಗೆ ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ. ದಾಖಲೆಗಳ ಮುಂದೆ ಬಂದೂಕು ಕೆಲಸಕ್ಕೆ ಬರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಿಡಿ, ಪೆನ್‌ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ಕಾಂಗ್ರೆಸ್ ಸಚಿವರೆ ಹೇಳಿದ್ದಾರೆ. ಇದರ ಬಗ್ಗೆ ಯಾವ ತನಿಖೆ ಮಾಡಿದ್ದೀರಾ ಜಿ.ಪರಮೇಶ್ವರ್ ಅವರೇ?. ಸಿದ್ದರಾಮಯ್ಯಗೆ ಇದರ ಬಗ್ಗೆ ಮಾಹಿತಿ ಇಲ್ವಾ?. ಯಾರ ಮನೆ ರೇಡ್ ಮಾಡಿಸಿದರು, ಏನೇನು ಸಿಕ್ಕಿತ್ತು. ಏಕೆ ಸುಫಾರಿ ಕೊಟ್ಟರು, ಸುಮ್ಮನೆ ಸುಫಾರಿ ಕೊಡುತ್ತಾರಾ?. ತನಿಖೆ ನಡೆಸಿ ಸತ್ಯ ಹೊರ ತರುತ್ತಾರಾ ಎಂದು ಪ್ರಶ್ನಿಸಿದರು.

ನಾನು ಮಾಜಿ ಪ್ರಧಾನಮಂತ್ರಿ ಮಗ, 2 ಬಾರಿ ಸಿಎಂ, ಕೇಂದ್ರ ಮಂತ್ರಿ. ನಾನು ಒತ್ತುವರಿ ಮಾಡಲು ಸಾಧ್ಯನಾ?. ರೆವಿನ್ಯೂ ಪ್ರಕರಣಕ್ಕೆ ಡಿವೈಎಸ್‌ಪಿ ತನಿಖಾಧಿಕಾರಿ ಮಾಡಿದ್ದು ಇತಿಹಾಸದಲ್ಲೇ ಮೊದಲು. ನನಗೆ ಈ ಪರಿಸ್ಥಿತಿ ತಂದವರು ಇನ್ನಷ್ಟು ಮನೆ ಹಾಳು ಮಾಡಿದ್ದೀರಿ?. ಕರೆಂಟ್, ಬಸ್, ಎಣ್ಣೆ ಎಲ್ಲದಕ್ಕೂ ತೆರಿಗೆ. ಸರ್ಕಾರ ಜನಗಳಿಂದ ಲೂಟಿ ಮಾಡುತ್ತಿದೆ. ನಾನು ಸಿಎಂ ಆಗಿದ್ದಾಗ ಪರ್ಸಟೇಂಜ್ ಇರಲಿಲ್ಲ. ಇವಾಗ ಎಷ್ಟು ಪರ್ಸಟೇಂಜ್ ನಡೆಯುತ್ತಿದೆ. ನಾನು ದಾಖಲೆ ಕೊಟ್ಟರೂ, ನ್ಯಾಯ ದೊರಕಲ್ಲ. ದಾಖಲೆಗಳನ್ನ ಭದ್ರವಾಗಿಟ್ಟಿದ್ದೇನೆ. ಒಂದು ಬಾರಿ 5 ವರ್ಷದ ಸ್ವತಂತ್ರ ಸರ್ಕಾರ ಕೊಡಿ. ಎಲ್ಲರನ್ನು ನೋಡಿದ್ದೀರಿ, ನನಗೂ ಒಂದು ಅವಕಾಶ ಕೊಡಿ. ಎಲ್ಲ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅವರ ಪಕ್ಷದ ಸಂಘಟನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯತೆ ಬೇಕು. ನಾವು ಸಂಘಟನೆಗಾಗಿ ಹೋರಾಟ ಮಾಡುತ್ತೇವೆ. ಸಮನ್ವಯತೆ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ. ಬೆಲೆ ಏರಿಕೆ ಬಗ್ಗೆ ನಾನು ಯಾರನ್ನು ಅಟ್ಯಾಕ್ ಮಾಡಿಲ್ಲ. ಯಾವುದೇ ಪ್ರತಿಭಟನೆಯನ್ನೂ ಮಾಡಿಲ್ಲ. ಆದರೆ ಕೇಂದ್ರ ಸರ್ಕಾರ ಮೇಲೆ ರಾಜ್ಯ ಸರ್ಕಾರ ಹೇಳುವುದು ದುಃಖಕರ ವಿಚಾರ. ಏಕೆ ದರ ಏರಿಕೆ ಮಾಡಿದ್ದಾರೆ ಎಂದು ಜನರೇ ತೀರ್ಮಾನಿಸಬೇಕು. ತೆರಿಗೆಯಿಂದ ಬಡ ಹೇಗೆ ಸದ್ಭಳಕೆ ಆಗುತ್ತದೆ ಎನ್ನುವುದನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.

ಮಂಡ್ಯಕ್ಕೆ ಮೆಡಿಕಲ್ ಕಾಲೇಜ್, ಕೆಎಸ್‌ಆರ್‌ಟಿಸಿ ವಿಭಾಗ ತಾನು ತಂದಿದ್ದು ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಚಲುವರಾಯಸ್ವಾಮಿಯನ್ನು ಜೋಕರ್.ಆ ಜೋಕರ್‌ಗೆ ನಾನು ಉತ್ತರ ಕೊಡಬೇಕಾ?. ಐಐಟಿಯೂ ಬಗ್ಗೆಯೂ ಹೇಳಿದ್ದಾರೆ. ಐಐಟಿ ಎಂದರೆ ಏನೆಂದು ಅರ್ಥ ಅವರಿಗೆ ಗೊತ್ತಾ?. ಇಂತಹ ಜೋಕರ್‌ಗಳಿಗೆ ಉತ್ತರ ಕೊಡಬೇಕಾ. 2004ರಲ್ಲಿ ಚಲುವರಾಯಸ್ವಾಮಿ ಮಂತ್ರಿ ಆಗಲಿಲ್ಲ. ಆಗ ರಾತ್ರಿ 3 ಗಂಟೆಯಾದರೂ ನನ್ನ ಮನೆಗೆ ಹೋಗೋಕೆ ಬಿಡಲಿಲ್ಲ. ಬಳಿಕ ಮಂತ್ರಿಯಾದರಲ್ವಾ, ಯಾರಿಂದ ಸಚಿವರಾದರು. ಪಾಪ ನನ್ನ ಮುಖ್ಯಮಂತ್ರಿ ಮಾಡಿದವರು ಅವರಲ್ಲವೇ?. ಮಂತ್ರಿ ಆಗುವಾಗ ಏನೇನೂ ಆಯ್ತು ನೆನಸಿಕೊಳ್ಳಪ್ಪ. ನಾನು ಇಂತಹ ಆರೋಗ್ಯ ಇಟ್ಟುಕೊಂಡಿರುವುದು ಅಂತಹವರ ಸಹವಾಸ ಮಾಡಿ. ಕೆರೆ ನುಂಗಾಕಿ ಅಣ್ಣನ ಹೆಸರಿಗೆ ರಿಜಿಸ್ಟರ್ ಮಾಡಿಸಿ ಗಿಫ್ಟ್ ಪಡೆಯುವವರು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತೀರಾ ಎಂದು ಟೀಕಾಪ್ರಹಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net