ರಾಜಕೀಯ ಸ್ವಾರ್ಥಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು ಮಾರಾಟ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

HDK criticizes the state Congress government mandya
Published on

ಮದ್ದೂರು: ಕಾವೇರಿ ನೀರನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನೆರೆಯ ರಾಜ್ಯಕ್ಕೆ ಮಾರಾಟ ಮಾರಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ನಮ್ಮ ರೈತರ ಹಾಳು ಮಾಡಿ ಕಾವೇರಿ ನೀರನ್ನು ಮಾರಾಟ ಮಾಡಿಕೊಂಡವರು ನೀವು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಡಿಎಂಕೆ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಮೌನ: ಇಲ್ಲಿ ಮೇಕೆದಾಟು ತರುತ್ತೇವೆ ಎನ್ನುತ್ತಾರೆ, ಕಾವೇರಿಯನ್ನು ಕಾಪಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಮೇಕೆದಾಟು ವಿರೋಧಿ ಆಗಿರುವ ಡಿಎಂಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ಸ್ಟಾಲಿನ್ ಅವರನ್ನು ಓಲೈಕೆ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಮೇಕೆದಾಟು ಯೋಜನೆಗೆ ಡಿಎಂಕೆ ತಕರಾರು ತೆಗೆದಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕ ರಾಜ್ಯ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ. ಎಲ್ಲ ರೀತಿಯಲ್ಲಿಯೂ ಅಡ್ಡಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ.ಶಿವಕುಮಾರ್ ಅವರಾಗಲಿ ಈ ಬಗ್ಗೆ ಇದುವರೆಗೂ ಚಕಾರ ಎತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶ: ಕೆಆರ್‌ಎಸ್‌ನಲ್ಲಿ 98 ಅಡಿ ನೀರಿದ್ದಾಗಲೂ ಭತ್ತ ನಾಟಿ ಮಾಡಬೇಡಿ ಎಂದು ಈ ಸರ್ಕಾರ ಫರ್ಮಾನು ಹೊರಡಿಸಿದೆ. ಮಂಡ್ಯ ಜನರನ್ನು ಅಪಮಾನ ಮಾಡಿದೆ. ಮಂಡ್ಯ ನೆಲಕ್ಕೆ ಪ್ರವೇಶ ಮಾಡುವಾಗ ‘ಸಕ್ಕರೆ ನಾಡಿಗೆ ಸ್ವಾಗತ’ ಎಂದು ನಾಮಫಲಕ ಇದೆ. ಆದರೆ, ಈ ಸರ್ಕಾರ ಮಂಡ್ಯವನ್ನು ಬರಡು ಜಿಲ್ಲೆ ಮಾಡಿದೆ. ಈ ಸರ್ಕಾರ ಬಂದ ಮೇಲೆ ಎಲ್ಲ ಕಡೆ ಕಬ್ಬು ಒಣಗಿದೆ. ಇನ್ನು ಅದಕ್ಕೆ ಬೆಂಕಿ ಹಾಕೋದು ಮಾತ್ರ ಬಾಕಿ ಇದೆ. ಕೋಟ್ಯಂತರ ರೂ. ನಾಶವಾಗಿದೆ. ಆದರೆ, ಕಾಂಗ್ರೆಸ್ 2000 ರೂ.ಕೊಟ್ಟರೆ ಉಪಯೋಗ ಏನು ಎಂದು ಪ್ರಶ್ನಿಸಿದರು.

ಕಾವೇರಿ ಬಗ್ಗೆ ಕಾಂಗ್ರೆಸ್ ಮೌನ: ಮೇಕೆದಾಟು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಸಭೆಯಲ್ಲಿ ದೇವೇಗೌಡರು ಪರಿಪರಿಯಾಗಿ ಬೇಡಿಕೊಂಡರೂ ಸದನದಲ್ಲಿಯೇ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ, ಇತರ ಕಾಂಗ್ರೆಸ್ ಸದಸ್ಯರು ಮೌನವಾಗಿ ಕೂತಿದ್ದರು. ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಮೊದಲು ಡಿಎಂಕೆಗೆ ಹೇಳಿ ಮನವೊಲಿಕೆ ಮಾಡಿ ಅಥವಾ ಡಿಎಂಕೆ ಬೆದರಿಕೆ ಸೊಪ್ಪು ಹಾಕಲ್ಲ, ನಮಗೆ ಮೇಕೆದಾಟು ಬೇಕು ಎಂದು ಹೇಳಿ. ಮೇಕೆದಾಟು ಯೋಜನೆಗೆ ನಾವು ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇವೆ. ನಿಮ್ಮ ಮಿತ್ರಪಕ್ಷ ಡಿಎಂಕೆ ಸರ್ಕಾರದ ಮನವೊಲಿಸಿ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ಹಿಂಪಡೆಯುವಂತೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.

ನಾನು ಸಾಯಲ್ಲ, ಇನ್ನೂ ಬದುಕಿರುತ್ತೇನೆ, ನಿನ್ನ ಕೈಯಿಂದಲೇ ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಮೂರು ದಿನಗಳ ಹಿಂದೆಯೂ ನನಗೆ ನಮ್ಮ ತಂದೆ ಹೇಳಿದ್ದರು. ಅವರ ಮಾತು ನಡೆದೇ ನಡೆಯುತ್ತದೆ. ಮೈಸೂರಿನಲ್ಲಿ ಮೋದಿ ಅವರೂ ಹೇಳಿದ್ದರು ಎಂದರು.

ಬರಗಾಲ ಬಂದರೆ ಕಾಂಗ್ರೆಸ್ಸಿಗರಿಗೆ ಸುವರ್ಣಕಾಲ: ದೇವೇಗೌಡರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ, ನರೇಂದ್ರ ಮೋದಿ ಅವರು ಹೇಗೆ ಗೌರವಿಸುತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ನಾನು ಮಂಡ್ಯ ಜಿಲ್ಲೆಗೆ 700 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಬಂದಾಗಲೆಲ್ಲ ಬರಗಾಲ ಬರುತ್ತದೆ. ಜನರಿಗೆ ಬರಗಾಲ, ಕಾಂಗ್ರೆಸ್ ನಾಯಕರಿಗೆ ದುಡ್ಡು ಮಾಡಲು ಸುವರ್ಣಕಾಲ ಎಂದು ಟೀಕಾ ಪ್ರಕಾರ ನಡೆಸಿದರು.

ನಿಮ್ಮ ಆಶೀರ್ವಾದ ಹಾಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇದ್ದರೆ ಕೇಂದ್ರದಲ್ಲಿ ನನಗೆ ಅಧಿಕಾರ ಸಿಗಬಹುದು. 2004ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಪ್ರೀತಿಯಿಂದ ಕೂಗುತ್ತಿದ್ದೀರಿ. ಆಗ ನನಗೆ ಶಾಸಕ ಆದರೆ ಸಾಕು ಎಂದುಕೊಂಡಿದ್ದೆ. ಮೊದಲ ಬಾರಿ ಶಾಸಕನಾದ 2006ರಲ್ಲಿ ಸಿಎಂ ಆದೆ. ನಿಮ್ಮ ಪ್ರೀತಿ, ದೇವರ ಆಶೀರ್ವಾದದಿಂದ ಅದೂ ಆಯಿತು. ಈಗ ನೀವು ಮುಂದಿನ ಕೇಂದ್ರ ಸಚಿವ ಎಂದು ಕೂಗುತ್ತಿದ್ದೀರಿ. ಪ್ರಜೆಗಳ ಮಾತು, ಪರಮೇಶ್ವರನ ಮಾತು ಎರಡೂ ಒಂದೇ ಎಂದು ಕುಮಾರಸ್ವಾಮಿ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net