

ಮಂಡ್ಯ: ಎನ್.ಚಲುವರಾಯಸ್ವಾಮಿ ನನ್ನನ್ನು ಸಿಎಂ ಮಾಡಿದರು ಎನ್ನುವುದು ಬಹುದೊಡ್ಡ ಜೋಕ್. ಶಾಸಕರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಎಂಬುದನ್ನು ಮರೆಯಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜತೆ ಶಾಸಕರು ಇದ್ದರು ಎಂಬುದು ಆಗ ನನ್ನ ಜತೆಯಲ್ಲಿಯೇ ಇದ್ದ ಆ ವ್ಯಕ್ತಿಗೂ ಗೊತ್ತು. ಈತನ ಮುಖ ನೋಡಿಕೊಂಡು ಶಾಸಕರು ಬಂದರಾ?. ಬದಲಿಗೆ ನನ್ನ ನಂಬಿಕೆ, ವಿಶ್ವಾಸದಿಂದ ಬಂದರು. ಎಲ್ಲವೂ ಈತನಿಗೆ ಗೊತ್ತಿಲ್ಲವೇ?. ಜೋಕರ್ ಸಂಸ್ಕೃತಿ ಶುರುವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಎನ್ನುವುದನ್ನು ಮರೆಯಬಾರದು. ಅವರು ಎಲ್ಲಿದ್ದರು?. ಆಮೇಲೆ ಎಲ್ಲೆಲ್ಲಿ ಹೋದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಆ ವ್ಯಕ್ತಿಗೆ ಉತ್ತರ ಕೊಡಬೇಕಿಲ್ಲ ಎಂದರು.
ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಎಂಎಲ್‌ಎಗಳು ಆ ವ್ಯಕ್ತಿಯನ್ನು ನೋಡಿ ಬಂದರಾ?. ಆ ವ್ಯಕ್ತಿಯನ್ನು ಮಂತ್ರಿ ಮಾಡಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಜಾವ ಮೂರು ಗಂಟೆವರೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಆ ಆಸಾಮಿ. ಈ ವ್ಯಕ್ತಿಯ ಮುಖ ನೋಡಿ 50 ಜನ ಶಾಸಕರು ಬಂದರಾ. ಅವರಿಗಾಗಿ ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯುವುದು ಬೇಡ ಎಂದು ಹೇಳಿದರು.
ಆ ವ್ಯಕ್ತಿಗೆ ಇರುವ ಚಟ ನನಗೆ ಇಲ್ಲ. ಮಂಡ್ಯದಲ್ಲಿ ಆತನ ಚಟಗಳ ಬಗ್ಗೆ ಕೇಳಿದರೆ ಜನ ಹಾದಿ ಬೀದಿಯಲ್ಲಿ ಹೇಳುತ್ತಾರೆ. ಚಟಗಳ ಬಗ್ಗೆ ಚರ್ಚೆ ಮಾಡುವುದು ಬೇಡ. ಅದು ಕೀಳುಮಟ್ಟದ ಅಭಿರುಚಿ. ಈ ಮನುಷ್ಯ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂಬುದು ನನಗೆ ಗೊತ್ತು. ನಾನು ದುಡ್ಡು ಮಾಡಬೇಕೆಂದು ಆಸೆಪಟ್ಟಿಲ್ಲ. ನಾನು ಜನರ ಮಧ್ಯ 24 ಗಂಟೆ ಕೆಲಸ ಮಾಡಿದ್ದೇನೆ. ಜನತಾದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗ್ಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ. ಜನರ ಕೆಲಸ ಮಾಡುವುದೇ ನನ್ನ ವೈಯಕ್ತಿಕ ಸಮಸ್ಯೆ. ನನಗೆ ಆತನಂತೆ ಯಾವುದೇ ಚಟ ಇಲ್ಲ. ಎಲ್ಲವನ್ನೂ ದೇವರು ನೋಡುತ್ತಾನೆ. ಯಾವ ಮನುಷ್ಯನೂ ಪರಿಶುದ್ಧನಲ್ಲ. ತಪ್ಪನ್ನು ಸರಿಪಡಿಸಿಕೊಳ್ಳಲು ಭಗವಂತ ಅವಕಾಶ ಕೊಡುತ್ತಾನೆ. ನಾನು ವಿಧಾನಸಭೆಯ ಕಲಾಪದಲ್ಲಿಯೇ ಹೇಳಿದ್ದೇನೆ. ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೇನೆ ಎಂದು. ನಾನೆಂದೂ ಇಲ್ಲ ಎಂದು ಹೇಳಿಲ್ಲ. ಆ ವ್ಯಕ್ತಿ ಏನೇನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಇಂತಹ ವಿಚಾರಗಳನ್ನು ಬಿಟ್ಟು ಜನರ ಬದುಕಿನ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದರು.
ಮಿಮ್ಸ್‌ಗೆ ಎಚ್‌ಡಿಕೆ ಭೇಟಿ, ಕಾಮಗಾರಿ ಪರಿಶೀಲನೆ
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಮಿಮ್ಸ್)ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಅಂತೆಯೇ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಅಧೀನದ ಕಂಪನಿಗಳ ಮೂರು ಕೋಟಿ ರೂ ಸಿಎಸ್‌ಆರ್ ಅನುದಾನದಡಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಹೊಸ ಶೌಚಗೃಹ ಬ್ಲಾಕ್ ನಿರ್ಮಾಣ, ಹಳೆ ಶೌಚಗೃಹ ನವೀಕರಣ, ಹೊಸ ಲಿಫ್ಟ್ ಅಳವಡಿಕೆ, ಮಕ್ಕಳ ಆರೈಕೆ ಘಟಕದ ಮೇಲ್ಛಾವಣಿ, ಹೊಸ ಕಿಟಕಿ ಬಾಗಿಲು ಅಳವಡಿಕೆ, ಕಟ್ಟಡಕ್ಕೆ ಬಣ್ಣ ಸೇರಿ ಮತ್ತು ಇನ್ನಿತರೆ ಕಾಮಗಾರಿ ವೀಕ್ಷಿಸಿದರು. ಭಾರತ್ ಹೆವಿ ಎಲೆಕ್ಟ್ರಿಕಲ್ ಹಾಗೂ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ, ಭಾರತೀಯ ಖನಿಜಾಭಿವೃದ್ಧಿ ನಿಗಮ ವತಿಯಿಂದ ಮಿಮ್ಸ್ಗೆ ಸಿಎಸ್‌ಆರ್ ನೆರವು ನೀಡಿವೆ. ಕ್ಯಾನ್ಸರ್ ಚಿಕಿತ್ಸಾ ಘಟಕದ ಉನ್ನತಿಕರಣಕ್ಕೂ ಅನುದಾನ ನೀಡುವುದಾಗಿ ಭರವಸೆ ನೀಡಿದ ಸಚಿವ ಎಚ್‌ಡಿಕೆ, ರೋಗಿಗಳಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಇತರರಿದ್ದರು.