ಮೈಸೂರು ಹಿನಕಲ್‌ನಲ್ಲೂ ಅಕ್ರಮ ನಿವೇಶನ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಮತ್ತೊಂದು ಗಂಭೀರ ಆರೋಪ

HDK Siddu
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆನ್ನುವ ಆರೋಪ ಗಂಭೀರತೆ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಹಿನಕಲ್‌ನಲ್ಲಿಯೂ ನಿವೇಶನ ಅಕ್ರಮ ಮಾಡಿಕೊಂಡಿದ್ದಾರೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿನಕಲ್‌ನಲ್ಲಿಯೂ ನಿವೇಶನ ಅಕ್ರಮವಾಗಿದೆ. ಈ ಪ್ರಕರಣದಲ್ಲಿ ಕೋರ್ಟ್ ಆದೇಶ ಆಗಿದೆ. 14 ನಿವೇಶನ ಪ್ರಕರಣ ಬೇರೆ, ಇದು ಬೇರೆ ವಿಚಾರ. ಹಿನಕಲ್ನಲ್ಲಿ 1986ರಲ್ಲಿ 434 ಎಕರೆ ಜಮೀನು ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತದೆ. ಸಾಕಮ್ಮ ಎಂಬವವರಿಂದ ಅರ್ಜಿ ಹಾಕಿಸಿದ್ದಾರೆ. 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತದೆ. ಅದನ್ನ ಸಿದ್ದರಾಮಯ್ಯ ಅವರು ಕೊಂಡುಕೊಂಡಿದ್ದಾರೆಂದು ವಿವರಿಸಿದರು.
ಮೈಸೂರು ಮುಡಾ ಕಡತಗಳು ಎಚ್‌ಡಿಕೆ ಮನೆಯಲ್ಲಿದೆ ಎಂಬ ಸಚಿವ ಭೈರತಿ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸರ್ಕಾರ ನನ್ನ ಕೈಯ್ಯಲ್ಲಿ ಇದ್ಯಾ?. ಮೈಸೂರು ನಗರವನ್ನು 30, 40 ವರ್ಷದಿಂದ ಗುತ್ತಿಗೆ ತಗೊಂಡಿದ್ದವರು ಸಿದ್ದರಾಮಯ್ಯ ಹಾಗೂ ಪಟಾಲಂ. ಭೈರತಿ ಸುರೇಶ್ ಹೆಲಿಕ್ಯಾಪ್ಟರ್‌ನಲ್ಲಿ ತರಾತುರಿಯಲ್ಲಿ ಏಕೆ ಹೋದರು. ಅಂದು ಅವರಿಗೆ ದಾಖಲೆ ಸಿಗಲಿಲ್ವಾ?. ಹೆಲಿಕ್ಯಾಪ್ಟರ್‌ನಲ್ಲಿ ದಾಖಲೆ ತುಂಬುವುದಕ್ಕೆ ಹೋಗಿದ್ದೋ, ಹಣದ ಗಂಟು ತಗೊಂಡು ಹೋಗುವುದಕ್ಕೆ ಹೋಗಿದ್ದೋ?. ಮುಡಾದಲ್ಲಿ ತಿಂಗಳಿಷ್ಟು ನಿಗದಿ ಮಾಡಿಕೊಂಡಿದ್ದ ಹಣ ತೆಗೆದುಕೊಂಡು ಬರುವುದಕ್ಕೆ ಹೋಗಿದ್ದಾ?. ಇವರೇನು ತಮಾಷೆ ಮಾಡುತ್ತಾರಾ?. ಮುಡಾದಲ್ಲಿ ಇರುವ ಕಡತವನ್ನು ನನ್ನ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ನಾನು ಸರ್ಕಾರಕ್ಕಿಂತ ದೊಡ್ಡವನಲ್ಲ. 30, 40 ವರ್ಷದ ರಾಜಕೀಯದಲ್ಲಿ ವಿರೋಧ ಪಕ್ಷದ ನಾಯಕರು, ಡಿಸಿಎಂ, ಎರಡು ಬಾರಿ ಸಿಎಂ ಆಗಿದ್ದಾರೆ. ಇಷ್ಟೆಲ್ಲ ಇದ್ದು ನಾನು ಕಡತ ತೆಗೆದುಕೊಂಡು ಹೋಗಲು ಆಗುತ್ತಾ ಎಂದು ಪ್ರಶ್ನಿಸಿದರು.

ಸಿಎಂ ಅಧಿಕಾರಿಗಳನ್ನೇಕೆ ಮನೆಗೆ ಕರೆಸಿಕೊಂಡಿದ್ದು?
ರಾಜ್ಯಸರ್ಕಾರಕ್ಕೆ ಕುಮಾರಸ್ವಾಮಿಯೇ ಪ್ರಮುಖ ಟಾರ್ಗೆಟ್. ಆದ್ದರಿಂದ ನನ್ನ ಮೇಲೆ ಎಫ್‌ಐಆರ್ ದಾಖಲು ಮಾಡಿಸಲೇಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಏನೆನೋ ಚರ್ಚೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಯಾವ ಉದ್ದೇಶಕ್ಕೆ ನನ್ನ ಮೇಲೆ ತನಿಖೆ ನಡೆಸುತ್ತಿದ್ದಾರೆ. ಯಾವ ಆಧಾರದಲ್ಲಿ ಇತ್ತೀಚೆಗೆ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ಮೊನ್ನೆ ಒಂದು ಎನ್‌ಸಿಆರ್ ಹಾಕಿಕೊಂಡಿದ್ದಾರೆ. ಎಫ್‌ಐಆರ್ ಮಾಡಿಸಲು ಸಿಎಂ ಮನೆಗೆ ಅಧಿಕಾರಿಗಳನ್ನು ಹೋಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇಡಿ ಐಟಿ ಅಸ್ತ್ರ ಎನ್ನುತ್ತಾರೆ. ಹಾಗಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಎಸ್‌ಐಟಿ ಅಸ್ತ್ರವಾಗಿದೆ. ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೇಸ್ಟಿಕೇಶನ್ ಟೀಮ್, ಶಿವಕುಮಾರ್ ಇನ್ವೇಸ್ಟಿಕೇಶನ್ ಟೀಮ್ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net