

ಮಂಡ್ಯ: ರಾಜ್ಯದಲ್ಲಿ ನೂತನ ಕೈಗಾರಿಕೆಗಳನ್ನು ಆರಂಭಿಸಿ ಯುವ ಜನಾಂಗಕ್ಕೆ ಉದ್ಯೋಗ ದೊರಕಿಸಿಕೊಡಲು ಕೇಂದ್ರ ಸರ್ಕಾರ ಆಸಕ್ತಿ ವಹಿಸಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಆಯೋಜಿಸಿರುವ ಎರಡು ದಿನದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನ ಕಾರ್ಖಾನೆಗಳನ್ನು ಆರಂಭಿಸಲು ಹಲವು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಕೈಗಾರಿಕಾಭಿವೃದ್ದಿ ಬಗ್ಗೆ ಯಾವ ಸಚಿವರೂ ಸಣ್ಣ ಚರ್ಚೆಗೂ ಅವಕಾಶ ಕೊಡುತ್ತಿಲ್ಲ. ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.
ರಾಜ್ಯಕ್ಕೆ ಕೈಗಾರಿಕೆ ತರಲು ಚರ್ಚೆ ಮಾಡುತ್ತಿದ್ದೇನೆ. ಒಂದು ರಾತ್ರಿಗೆ ಕೈಗಾರಿಕೆ ಮಾಡಲು ಸಾಧ್ಯವಿಲ್ಲ. ಉದ್ಯೋಗ ಮೇಳದ ಮೂಲಕ ಎರಡೂವರೆ ಸಾವಿರ ಯುವಕರಿಗೆ ಕೆಲಸ ಕೊಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆದರೆ ರಾಜ್ಯಸರ್ಕಾರಕ್ಕೆ ಹೃದಯ ವೈಶಾಲ್ಯತೆ ಇಲ್ಲ. ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಿದೆ. ಕುಮಾರಸ್ವಾಮಿ ದೆಹಲಿಯಲ್ಲಿ ಕೆಲಸ ಮಾಡದೆ ಕರ್ನಾಟಕ, ಮಂಡ್ಯಕ್ಕೆ ಏಕೆ ಬರುತ್ತಾರೆ ಎನ್ನುತ್ತಾರೆ. ಇದು ರಾಜ್ಯ ಸರ್ಕಾರದ ಸಣ್ಣತನ ಎಂದು ಕಿಡಿಕಾಡಿದರು.
ರಾಜ್ಯದಲ್ಲಿ ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ಘಟಕ ತೆರೆಯಲು ವಿಫುಲ ಅವಕಾಶಗಳಿವೆ. ಸಿಮೆಂಟ್ ಕಾರ್ಖಾನೆ ಆರಂಭಕ್ಕೂ ಅವಕಾಶವಿದ್ದು, ಈ ಸಂಬಂಧ ಸಮಸ್ಯೆ ನಿವಾರಣೆಗೆ ಬದ್ಧನಾಗಿದ್ದೇನೆ. ಅಂತೆಯೇ ಬೃಹತ್ ಕೈಗಾರಿಕಾ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಡುವ ಪ್ರತ್ಯೇಕ ವಿಭಾಗ ತೆರೆಯಲು ಚಿಂತಿಸಲಾಗಿದೆ ಎಂದು ತಿಳಿಸಿದರು.