

ಮಂಡ್ಯ: ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನರು ಛೀ ಥೂ ಎಂದು ಬೈಯ್ಯುತ್ತಿದ್ದಾರೆ. ಸಾಲು ಸಾಲು ಹಗರಣಗಳು ನಡೆಯುತ್ತಿವೆ. ಆ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಜನಾಂದೋಲನಾ ಯಾತ್ರೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡವಳಿಕೆಗಳು ಅನಾವರಣ ಆಗುತ್ತಿವೆ. ಆರಂಭದಲ್ಲಿ ಸ್ವಚ್ಛ ಆಡಳಿತ ಕೊಡುತ್ತೇವೆಂದು ಅಧಿಕಾರಕ್ಕೆ ಬಂದರು. ಆದರೆ ಬಳಿಕ ಸಂಪೂರ್ಣ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈ ಪಾದಯಾತ್ರೆ ಯಾರ ಮೇಲಿನ ದ್ವೇಷಕ್ಕಾಗಿ ಮಾಡುತ್ತಿರುವುದಲ್ಲ. ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಅಕ್ರಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಮುಡಾದಲ್ಲಿ ಸೈಟ್ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಂವಿಧಾನದ ಅಡಿ ಕೆಲಸ ಮಾಡಬೇಕು. ಸಿಎಂ ಕುಟುಂಬದಲ್ಲೇ ಅಕ್ರಮ ನಡೆದಿದೆ. ಅದು ಸರ್ಕಾರದ ಜಾಗ. ಸರ್ಕಾರಿ ಜಮೀನನ್ನ ಕಾನೂನುಬಾಹಿರವಾಗಿ ಪಡೆದಿರುವುದರ ವಿರುದ್ಧ ನಮ್ಮ ಹೋರಾಟ ಎಂದರು.
ಹಿಂದುಳಿದ ವರ್ಗದವರು ಎಂದು ನಾವು ಟಾರ್ಗೆಟ್ ಮಾಡುತ್ತಿಲ್ಲ. ಎರಡಲ್ಲ ಇನ್ನೊಮ್ಮೆ ಸಿಎಂ ಆಗಿ ನಮ್ಮ ಅಭ್ಯಂತರವಿಲ್ಲ. ಹಿಂದುಳಿದ ವರ್ಗಕ್ಕೆ ಮಾತ್ರ ನೀವು ಸಿಎಂ ಆಗಿಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವವರ ರಕ್ಷಣೆ ಮಾಡುತ್ತಿರುವುದನ್ನು ಜನರಿಗೆ ತಿಳಿಸಲು ನಮ್ಮ ಹೋರಾಟ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಹಣ ಲೂಟಿ ಮಾಡಿ ಅಂಬೇಡ್ಕರ್ ಅವರ ಹೆಸರಿಗೆ ಕಳಂಕ ತಂದಿದ್ದು ಕಾಂಗ್ರೆಸ್ ಸರ್ಕಾರ. ಈ ಬಗ್ಗೆ ಜನರಿಗೆ ತಿಳಿಸಲು ನಮ್ಮ ಹೋರಾಟ. ಆದರೆ ಜನಾಂದೋಲನದ ಮೂಲಕ ನಿಮ್ಮ ತಪ್ಪು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಸುಖಾ ಸುಮ್ಮನೇ ವೈಯಕ್ತಿಕ ಟೀಕೆ, ಆರೋಪ ಮಾಡುತ್ತಿದ್ದಾರೆ ಎಂದರು.
ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಇಬ್ಬಗೆ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದೆಹಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ ಎಚ್‌ಡಿಕೆ, ಕೇಂದ್ರ ಸಚಿವರಾದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆಂದು ನಾನು ಹೇಳಿದ್ದೆ ಎಂದು ಡಿಸಿಎಂ ಹೇಳಿದ್ದಾರೆ. ನಾನು ಹೇಳಿದ್ದು, ನಿಮ್ಮ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ನಾಯಕರನ್ನು ಒಪ್ಪಿಸಿ. ಅದಾದ ಮೇಲೆ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದ್ದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲು ತಾಯಿ ಚಾಮುಂಡೇಶ್ವರಿ ಕರುಣೆ ಕಾರಣ. ನಿಮ್ಮದೇನೂ ಇಲ್ಲಿ ಇಲ್ಲ. ನಿಮಗೆ ಜನರಿಂದ ದುಡ್ಡು ಗುಂಜೋದಕ್ಕೆ ಸಮಯ ಇಲ್ಲ. ಸರಣಿ ಹಗರಣಗಳ ಮೂಲಕ ಲೂಟಿ ಹೊಡೆಯುತ್ತಿದ್ದೀರಿ ಎಂದು ಟೀಕಾಪ್ರಹಾರ ನಡೆಸಿದರು.
ಕೆಆರ್‌ಎಸ್ ಅಣೆಕಟ್ಟೆ ತುಂಬಿ ತಮಿಳುನಾಡಿಗೆ ನಿರರ್ಗಳವಾಗಿ ನೀರು ಹರಿದು ಹೋಯಿತು. ಆದರೆ, ಜಿಲ್ಲೆಯ ಮಳವಳ್ಳಿ, ಕೊಪ್ಪ ಸೇರಿದಂತೆ ಕೊನೆಯ ಭಾಗಕ್ಕೆ ನೀರು ಹೋಗಿಲ್ಲ. ಕೆರೆಗಳು ತುಂಬಿಸಲ್ಲ. ಬೆಳೆ ಬೆಳೆಯಲು ಕಟ್ಟು ಪದ್ಧತಿಯಲ್ಲಿ ನೀರು ಕೊಡುತ್ತೀರಿ ಎನ್ನುತ್ತೀರಿ. ನಿಮಗೆ ನಾಚಿಕೆ ಆಗಬೇಕು. ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ. ಆ ಸಮಯದಲ್ಲಿ ರಾಜ್ಯದವರೇ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ. ಅವರು ಏಕೆ ದೇವೇಗೌಡರಿಗೆ ದನಿಗೂಡಿಸಲ್ಲ?. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಕುಮ್ಮಕ್ಕಾಗಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ ಎಂದು ಆರೋಪ ಮಾಡಿದರು.
ತಮಿಳುನಾಡಿಗೆ 140 ಟಿಎಂಸಿ ನೀರು ಹೋಗಿದೆ. ತಮಿಳುನಾಡಿನ ಸೇಲಂ ಬಳಿ 700 ಕೋಟಿ ರೂ ವೆಚ್ಚ ಮಾಡಿ ಅಲ್ಲಿನ ಸರ್ಕಾರ ಜಲಾಶಯ ಕಟ್ಟಿಕೊಂಡಿದೆ. ಆದಾಗ್ಯೂ ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ನೀರು ಬಿಡಲಾಗಿದೆ. ಇದರಿಂದ ಮತ್ತೊಂದು ಜಲಾಶಯದ ಅವಶ್ಯಕತೆ ಬಗ್ಗೆ ತಮಿಳುನಾಡಿನ ರೈತರೇ ಮಾತನಾಡುತ್ತಿದ್ದಾರೆ. ಹೀಗಾಗಿ ಮೊದಲು ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಮುಂದಾಗಿ. ನಮ್ಮ ನೀರು, ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.