ಡಿಕೆಶಿಗೆ ಸಿಎಂ ಕುರ್ಚಿಯ ಹುಚ್ಚು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು

HDK vs DKS
Published on
ಮಂಡ್ಯ: ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಕುರ್ಚಿಯ ಹುಚ್ಚು ಹಿಡಿದಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಕುಮಾರಸ್ವಾಮಿಗೆ ಹುಚ್ಚು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ತಿರುಗೇಟು ನೀಡಿದ ಎಚ್ಡಿಕೆ, ಚನ್ನಪಟ್ಟಣಕ್ಕೆ ಹೋಗಿ ಹುಚ್ಚ ಯಾರೆಂದು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ನಾನು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಮುಡಾ ಹಗರಣಕ್ಕೆ ಮೂಲ ಪುರುಷ ಯಾರು?. ನನಗೆ ರಾಜಕಾರಣ ಗೊತ್ತಿಲ್ಲವೇ?. ಒಂದಷ್ಟು ದಿನ ದೇವೇಗೌಡರ ಕುಟುಂಬದ ಮೇಲೆ ಆರೋಪ ಬಂತು. ಯಾರು ಯಾರಿಗೆ ಎಷ್ಟೆಷ್ಟು ಹಣ ಕೊಟ್ಟು ಪ್ರಚಾರ ಮಾಡಿಸಿದರು. ದೇವೇಗೌಡರ ಕುಟುಂಬ ಮುಗಿಸಲು ಹೇಗೆ ಹೊರಟಿರಿ ನನಗೆ ಗೊತ್ತು. ಅದೆಲ್ಲ ಮುಗಿತು, ಈಗ ಮುಖ್ಯಮಂತ್ರಿ ಮೇಲೆ ನಡೆಯುತ್ತಿದೆ. ಮುಡಾ 50:50 ನಾನಾ ತಂದಿದ್ದು. ಈ ಹುಚ್ಚರೆ ಮುಡಾ ಹಗರಣ ತಂದಿರುವುದು. ಸಿಎಂ ಕುರ್ಚಿಯ ಹುಚ್ಚು ಅವರಿಗೆ ಹಿಡಿದಿದೆ ಎಂದು ಡಿಕೆಶಿ ವಿರುದ್ಧ ಟೀಕಾ ಪ್ರಕಾರ ನಡೆಸಿದರು. 
ನನಗೆ ಜನತಾದರ್ಶನ ನಡೆಸಲು ಪವರ್ ಇಲ್ಲವೇ?. ಕಳೆದ ಚುನಾವಣೆ ಮುನ್ನ ಬೆಂಗಳೂರು ಗ್ರಾಮಾಂತರದ ಅಂದಿನ ಸಂಸದ ಸಭೆ ಮಾಡಿದ್ದರು. ಹಳ್ಳಿಹಳ್ಳಿಗೆ ಅಧಿಕಾರಿಗಳ ಕರೆದುಕೊಂಡು ಹೋಗಿದ್ದರು. ಈಗ ನಾನು ಜನತಾದರ್ಶನ ಮಾಡುತ್ತೇನೆಂದು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ಅವಕಾಶವಿದೆ. ರಾಜ್ಯ ಸರ್ಕಾರಕ್ಕೆ ಅಲ್ಪಸ್ವಲ್ಪವಾದರೂ ಜ್ಞಾನ ಇದೆಯೇ? ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಫ್ರೋಟೋಕಾಲ್  ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ. ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.‌ ಅದರಲ್ಲಿ ಯಾವುದೇ ಸಂಶಯವಿಲ್ಲ. ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡುತ್ತಿದ್ದಾರೆ. ಎಚ್ಎಂಟಿ ಭೂಮಿಯನ್ನು ಯಾರ‌್ಯಾರು ಹೊಡೆದಿದ್ದೀರಿ. ಅದರ ಬಗ್ಗೆ ತನಿಖೆ ಮಾಡುತ್ತೀರಾ ಎಂದು ಸವಾಲು ಹಾಕಿದ ಎಚ್ಡಿಕೆ, ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯದ ಬಗ್ಗೆ ಚಿಂತೆ ಮಾಡಿದ್ದೀರಾ. ನಾನು ಕಡುಬು ತಿನ್ನಲು ಕುಳಿತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜಾಗಟೆ ಬಾರಿಸಿಕೊಂಡು ಹೋದರು. ಆದರೆ ರಾಜ್ಯಕ್ಕೆ ಇವರಿಂದ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net