ರೈತರ ಹಿತಕ್ಕಿಂತ ಅಭಿನಂದನೆಯೇ ಮುಖ್ಯವೇ?: ಕೇಂದ್ರ ಸಚಿವ ಎಚ್‌ಡಿಕೆ ವಿರುದ್ಧ ಮೈಷುಗರ್ ಅಧ್ಯಕ್ಷ ಗಂಗಾಧರ ವಾಗ್ದಾಳಿ

HDK against Mysugar President criticism Mandya
Published on

ಮಂಡ್ಯ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸರ್ವಪಕ್ಷದ ಸಭೆಗೆ ಮಂಡ್ಯ ಸಂಸದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೋಗಿಲ್ಲ. ಜಿಲ್ಲೆಯ ರೈತರ ಹಿತಕ್ಕಿಂತ ಪಾಂಡವಪುರದಲ್ಲಿ ನಡೆದ ಅಭಿನಂದನಾ ಸಮಾರಂಭವೇ ಮುಖ್ಯವಾಯಿತೇ ಎಂದು ಮೈಷುಗರ್ ಅಧ್ಯಕ್ಷರೂ ಆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಪ್ರಶ್ನಿಸಿದರು.

ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಾವು ರಾಜೀನಾಮೆ ಕೇಳುತ್ತಿಲ್ಲ. ಪದತ್ಯಾಗ ಮಾಡಿ ಎನ್ನುತ್ತಿಲ್ಲ. ಸರ್ವಪಕ್ಷಗಳ ಸಭೆಗೆ ಬಂದು ಅಭಿಪ್ರಾಯ ಹೇಳಿ ಎಂದು ಕೇಳಲಾಗಿತ್ತು. ಆದರೆ, ಸಭೆಗೆ ಏಕೆ ಹೋಗಲಿಲ್ಲ. ಎಚ್‌ಡಿಕೆ ಅವರು ಕಾವೇರಿ ವಿಚಾರದಲ್ಲಿ ಗಂಭೀರತೆ ತೋರದೆ ರೈತರಿಗೆ ನೋವುಂಟು ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ರೈತರ ಹಿತಕ್ಕಾಗಿ ಸಭೆ ಕರೆದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಭೆಗೆ ಬರುತ್ತಿದ್ದರು. ಆದರೆ, ಚುನಾವಣೆ ಪೂರ್ವದಲ್ಲಿ ಕಾವೇರಿ ಸಮಸ್ಯೆ ಬಗೆಹರಿಸುವುದಾಗಿ ವಾಗ್ದಾನ ನೀಡಿದ್ದ ಎಚ್‌ಡಿಕೆ ಅವರೀಗ ಇದು ಶತಮಾನದ ಸಮಸ್ಯೆ, ವಾರದಲ್ಲಿ ಬಗೆಹರಿಸಲಾಗುತ್ತದೆಯೇ ಎನ್ನುತ್ತಾರೆ. ಈ ರೀತಿಯ ಉಡಾಫೆಯ ಮಾತನಾಡುವುದು ಖಂಡನೀಯ. ಮೇಕೆದಾಟು ಯೋಜನೆಯ ಡಿಆರ್‌ಪಿ ಸಿದ್ಧವಾಗಿದೆ. ಇದಕ್ಕೆ ಕೇಂದ್ರ ಸರಕಾರದಿಂದ ಅನುಮೋದನೆ ದೊರಕಿಸಿಕೊಡುವ ಕೆಲಸವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಬೇಕೆಂದು ಒತ್ತಾಯಿಸಿದರು.

ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಸಂಕಷ್ಟದ ಸಮಯದಲ್ಲಿ ನಮಗೆ ಕಬಿನಿ ಜಲಾಶಯ ನೆರವಿಗೆ ಬಂದಿದೆ. 25 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹೋಗುತ್ತಿದೆ. ಆದರೆ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವರ‌್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಎಚ್‌ಡಿಕೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಸ್ತುವಾರಿ ದ್ಯಾವಣ್ಣ, ಜಿಲ್ಲಾ ಉಪಾಧ್ಯಕ್ಷ ಜಯರಾಂ, ಮಂಡ್ಯ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net