

ಅರಸೀಕೆರೆ: ದೇಶದ ಸಮಗ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಗರದ ಗಣಪತಿ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.
ಎಚ್.ಡಿ.ದೇವೇಗೌಡರ ಅವರು ಅಧಿಕಾರ ನಡೆಸಿದ ಹನ್ನೊಂದು ತಿಂಗಳಿನಲ್ಲಿ ಜಮ್ಮು, ಕಾಶ್ಮೀರದ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ದೇಶದ ಉದ್ದಗಲಕ್ಕೂ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ ಅಗ್ರಗಣ್ಯ ನಾಯಕ ಎಂದರೆ ತಪ್ಪಾಗಲಾರದು. ಎಚ್.ಡಿ.ದೇವೇಗೌಡರು ಸಿಎಂ ಆಗಿದ್ದ ಅವಧಿಯಲ್ಲಿ ಶಾಸನ ಸಭೆ ಪ್ರವೇಶಿಸಿ ಜನಪರ ಕೆಲಸ ಮಾಡಲು ಅವಕಾಶ ದೊರೆತ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಬಣ್ಣಿಸಿದರು.
ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಇಳಿವಯಸ್ಸಿನಲ್ಲಿಯೂ ದೇಶದ ಅಭಿವೃದ್ಧಿಗೆ ಸದಾ ಚಿಂತನೆ ನಡೆಸುವ ಧೀಮಂತ ವ್ಯಕ್ತಿತ್ವ ಎಚ್‌ಡಿಡಿ ಅವರದ್ದಾಗಿದೆ. ಕಾವೇರಿ, ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರವನ್ನು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿ ಕನ್ನಡಿಗರ ಮನಗೆದ್ದ ಹಮ್ಮೆಯ ನಾಯಕರಾಗಿದ್ದಾರೆ. ನೆರೆಯ ಪಾಕಿಸ್ತಾನದ ಸಂಘರ್ಷ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ದೇಶದ ನಾಗರಿಕರ ರಕ್ಷಣೆ ವಿಷಯದಲ್ಲಿ ಸೂಕ್ತ ನಿಲುವು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಯುವ ರಾಜಕಾರಣಿಗಳಿಗೆ ರಾಜಕೀಯ ಸ್ಫೂರ್ತಿಯ ಸೆಲೆಯಾಗಿದೆ. ಹೋರಾಟದ ಗುಣ ಮೈಗೂಡಿಸಿಕೊಳ್ಳೋಣ ಎಂದರು.
ತಾಪಂ ಮಾಜಿ ಸದಸ್ಯ ಹಸೂರು ಗಂಗಧಾರ್ ಮಾತನಾಡಿ, ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಅನುಭವಿಸುತ್ತಿರುವ ಹಲವು ನಾಯಕರು ಮಾಜಿ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದು ಹೋಗಿದ್ದಾರೆ. ಜೆಡಿಎಸ್ ಪಕ್ಷ ನಾಯಕರನ್ನು ಹುಟ್ಟು ಹಾಕುವ ಕಾರ್ಖಾನೆಯಿದ್ದಂತೆ. ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲಗೊಳಿಸಲು ಸಲಹೆ, ಮಾರ್ಗದರ್ಶನ ನೀಡುವ ಕಾರ್ಯ ಮುಂದುವರಿಸಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಂಘಟಿತ ಹೋರಾಟ ನಡೆಸಿ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ನೀಡಲಾಗುವುದು ಎಂದರು.
ಮುಖಂಡರಾದ ಹುಲ್ಲೇಕೆರೆ ಕುಮಾರ್, ರಾಂಪುರ ಶೇಖರಪ್ಪ,ಬಿ.ಜಿ.ನಿರಂಜನ್, ವೇಣು, ರಮೇಶ್, ಸಂತೋಷ್, ಲಾಳನಕೆರೆ ಯೋಗೀಶ್ ಸೇರಿದಂತೆ ಹಲವು ಮುಖಂಡರು ಇದ್ದರು.