ಜನವರಿಗೆ ಪಂಚರತ್ನ ರೂಪುರೇಷೆ ; ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

04 111
Published on

ನೊಣವಿನಕೆರೆ : ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮ ತರುವ ಘೋಷಣೆ ಮಾಡಿದ್ದು, ಜನವರಿಯಲ್ಲಿ ಯೋಜನೆ ಮಾಹಿತಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಿಪಟೂರು ತಾಲೂಕು ಬಜಗೂರು ಗ್ರಾಮದಲ್ಲಿ ಸೋಮವಾರ ನಾಡಪ್ರಭು ಕೆಂಪೇಗೌಡ ಯುವ ವೇದಿಕೆ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಿರುವ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ, ಆರೋಗ್ಯ, ಶಿಕ್ಷಣ, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ, ಸೂರಿಲ್ಲದ ಪ್ರತಿ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಯೋಜನೆ ಇದಾಗಿದೆ ಎಂದರು.

13 ವರ್ಷಗಳ ಹಿಂದೆ ಅಂಬರೀಷ್ ಜತೆ ಗ್ರಾಮಕ್ಕೆ ಬಂದಿದೆ. ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿರುವುದು ಗೌರವ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಈ ಮಟ್ಟಕ್ಕೆ ಬೆಳೆಯಲು ಕೆಂಪೇಗೌಡರು ಹಾಗೂ ಅವರ ವಂಶಸ್ಥರು ದೂರ ದೃಷ್ಟಿ ಕಾರಣ. ಸರ್ಕಾರಕ್ಕೆ ಬರುವ ತೆರಿಗೆ ಹಣದಲ್ಲಿ ಶೇ.70 ಹಣ ಬೆಂಗಳೂರು ನಗರದಿಂದ ಬರುತ್ತಿದ್ದು, ರಾಜ್ಯ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

1991ರಲ್ಲಿ ಕೇಂದ್ರ ಸರ್ಕಾರ ಗೊಬ್ಬರದ ಮೇಲಿನ ಸಬ್ಸಿಡಿ ತೆಗೆಯಲು ಮುಂದಾದಾಗ ಸಂಸದೀಯ ಜೀವನದಲ್ಲಿಯೇ ಪ್ರಥಮವಾಗಿ ಸದನದ ಬಾವಿಗಿಳಿದು ಪ್ರತಿಭಟಿಸಿ ಸಬ್ಸಿಡಿ ಮುಂದುವರಿಸುವಂತೆ ಮಾಡಿದ್ದು, ದೇವೇಗೌಡರಿಗೆ ರೈತರ, ಬಡವರ ಮೇಲಿನ ಪ್ರೀತಿ, ಕಾಳಜಿ ತೋರಿಸುತ್ತದೆ ಎಂದರು.

ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶಂಭುಲಿಂಗನಾಥಸ್ವಾಮೀಜಿ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರತಿಮೆ ಒಂದು ಸಣ್ಣ ಗ್ರಾಮದಲ್ಲಿ ಯುವಕರು ಹಾಗೂ ಹಿರಿಯರ ಸಹಕಾರದಿಂದ ನಿರ್ಮಾಣವಾಗಿದ್ದು ಮೃದು ಹೃದಯಿಗಳು ಆದ ಕುಮಾರಸ್ವಾಮಿ ಅವರು ಪ್ರತಿಮೆ ಅನಾವರಣ ಮಾಡುತ್ತಿರುವುದು ಸಂತಸ ತಂದಿದೆ. ಎಲ್ಲ ವರ್ಗದ ಜನರ ಸಹಕಾರದಿಂದ ಈ ಕಾರ್ಯವಾಗಿದ್ದು ಕೆಂಪೇಗೌಡರ ಆದರ್ಶಗಳನ್ನು ಪಾಲಿಸೋಣ ಎಂದರು.

ಪ್ರತಿಮೆ ದಾನಿ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ದಸರೀಘಟ್ಟ ಶಾಖಾಮಠದ ಶ್ರೀಚಂದ್ರಶೇಖರ ಸ್ವಾಮೀಜಿ, ಆದಿಚುಂಚಮಗಿರಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಮಾಜಿ ಶಾಸಕ ಕೆ.ಷಡಕ್ಷರಿ, ಮುಖಂಡ ಕೆ.ಟಿ.ಶಾಂತಕುಮಾರ್, ತಿಪಟೂರು ವೈದ್ಯ ಡಾ.ವಿವೇಚನ್, ನಾಡಪ್ರಭು ಕೆಂಪೇಗೌಡ ಯುವ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬೆಳ್ಳಿರಥದಲ್ಲಿ ಮೆರವಣಿಗೆ : ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್‌ನಿಂದ ಬಜಗೂರು ಗ್ರಾಮದವರೆಗೆ ಬೈಕ್ ರ‌್ಯಾಲಿ ಹಾಗೂ ಗ್ರಾಮದ ಈಶ್ವರ ದೇವಸ್ಥಾನದಿಂದ ವೇದಿಕೆವರೆಗೆ ಬೆಳ್ಳಿರಥದಲ್ಲಿ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ರಾಜ್ಯದಲ್ಲಿ ನಮ್ಮ ಸಮಾಜದ ಮೂವರು ಗಣ್ಯವ್ಯಕ್ತಿಗಳಾದ ಸಾಹಿತ್ಯ ಕ್ಷೇತ್ರದ ಕುವೆಂಪು, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ರಾಜಕೀಯ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಹೆಸರಿದೆ. ಈ ಮೂವರು ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯ. ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net