ವಿಕ್ರಂ ಸಿಂಹ ಬಂಧನದ ಹಿಂದೆ ಎಚ್‌ಡಿಡಿ ಕುಟುಂಬದ ಕೈವಾಡ

mysore
Published on

ಮೈಸೂರು; ಸಂಸದ ಪ್ರತಾಪ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಬಂಧನದ ಹಿಂದೆ ಎಚ್.ಡಿ.ದೇವೇಗೌಡರ ಕುಟುಂಬದ ಕೈವಾಡ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.


ಇದು ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಾರಿಕೆಯ ಒಂದು ಭಾಗ. ಪ್ರತಾಪ್ ಸಿಂಹ ಹೆಸರು ಹಾಳು ಮಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಪಡೆದುಕೊಳ್ಳಲು ದೇವೇಗೌಡರ ಕುಟುಂಬ ಹುನ್ನಾರ ನಡೆಸಿದೆ. ಹೀಗಾಗಿ, ಈ ಅಕ್ರಮ ಈಗ ಬಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಕುಮಾರಸ್ವಾಮಿ ಅವರು ಕೆಲವು ದಿನಗಳಿಂದ ಪ್ರತಾಪ ಸಿಂಹ ಹಾಗೂ ಅವರ ಸಹೋದರನ ವಿರುದ್ಧ ಮೃದು ಧೋರಣೆ ಅನುಸರಿಸುವ ಉದ್ದೇಶ ಏನು? ವಿಕ್ರಂ ಸಿಂಹ ಬಂಧನದಲ್ಲಿ ದೇವೇಗೌಡರ ಕುಟುಂಬದ ಕೈವಾಡದ ಬಗ್ಗೆ ಜನರು ಮಾತಾಡುತ್ತಿದ್ದಾರೆ ಎಂದು ಹಾಸನದ ಪತ್ರಿಕೆಯೊಂದು ವರದಿ ಮಾಡಿದೆ ಎಂದರು.


ಕಡ್ಲೆಕಾಯಿ ಗಿಡವೇ?


ಕುಮಾರಸ್ವಾಮಿ ಯಾರನ್ನಾದರೂ ಹೊಗಳಿದರೆ ಅವರಿಗೆ ಗಂಡಾಂತರ ಕಾದಿದೆ ಎಂದೇ ಅರ್ಥ. ಖೆಡ್ಡಾ ಯಾರು ಯಾರಿಗೆ ತೊಡಿದ್ದಾರೆ ಎಂಬುದನ್ನು ಪ್ರತಾಪ ಸಿಂಹ ಮತ್ತು ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.


ಬೇರೆ ಕಡೆಯಿಂದ ಬೀಟೆ ಮರಗಳನ್ನು ಕಡಿದು ತಂದು ಹಾಕಲು ಅದೇನು ಕಡ್ಲೆಕಾಯಿ ಗಿಡವೇ? ಕುಮಾರಸ್ವಾಮಿ ಅವರು ಸಾಮಾನ್ಯ ಜ್ಞಾನ ಇಲ್ಲದವರಂತೆ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಾರೆ. ಹಿಟ್ ಆ್ಯಂಡ್ ರನ್ ಹೇಳಿಕೆ ಕೊಡುವುದನ್ನು ಅವರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ಸಾ.ರಾಗೆ ಮೈಸೂರು ಟಿಕೆಟ್


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಾ.ರಾ.ಮಹೇಶ್ ಅವರಿಗೆ ಟಿಕೆಟ್ ಕೊಡಿಸಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದು, ಈ ಮೂಲಕ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.


ಮೈಸೂರು ಕ್ಷೇತ್ರವನ್ನು ಬಿಜೆಪಿಗೆ ಬಿಡಲು ತಯಾರಿಲ್ಲ. ಸಾ.ರಾ.ಮಹೇಶ್ ಸ್ಪರ್ಧಿಸುವುದಿಲ್ಲ ಎಂಬ ಮಾತಿನಲ್ಲಿಯೇ ಸ್ಪರ್ಧೆ ಬಗ್ಗೆ ಸುಳಿವಿದೆ ಎಂದರು.
ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲು ಮಾತುಕತೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ ಕೇಳುತ್ತಿದೆ. ನಾಲ್ಕರಲ್ಲೂ ದೇವೇಗೌಡರ ಕುಟುಂಬದವರೇ ಸ್ಪರ್ಧೆ ಮಾಡಬಹುದು ಎಂದು ಕಿಡಿಕಾರಿದರು.


ಬೆಂಕಿ ಹಚ್ಚುವ ಕೆಲಸ


ಸಂಸದ ಪ್ರತಾಪಸಿಂಹ, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತುಚ್ಛವಾಗಿ ಮಾತಾಡಿದ್ದಾರೆ. ಮಾಜಿ ಶಾಸಕ, ಆಶ್ರಯ ಸಮಿತಿ ಅಧ್ಯಕ್ಷರ ಕಾನೂನಾತ್ಮಕ ಅಧಿಕಾರದ ಬಗ್ಗೆ ತಿಳಿದು ಮಾತಾಡಬೇಕು. ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗರನ್ನು ಎತ್ತಿ ಕಟ್ಟುವಂತಹ ಹೇಳಿಕೆ ಕೊಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ರೈತರ ಸಂಕಷ್ಟ ಕೇಳದೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಹರಿಹಾಯ್ದರು


ಯತ್ನಾಳ್‌ಗೆ ಸರ್ಕಾರದಿಂದ ಸನ್ಮಾನಿಸಿ:


ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಸ್ಕ್, ಕೋವಿಡ್ ಕಿಟ್ ಸಹಿತವಾಗಿ ವೈದ್ಯ ಉಪಕರಣಗಳ ಖರೀದಿಯಲ್ಲಿ 40 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆಂದು ಸತ್ಯ ಹೇಳುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸರ್ಕಾರದ ವತಿಯಿಂದ ಸನ್ಮಾನಿಸಬೇಕು ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಭೇಟಿ ಬಳಿಕವೂ ತಮ್ಮ ಆರೋಪದ ಕುರಿತು ಯತ್ನಾಳ್ ಪುನರುಚ್ಚರಿಸಿದ್ದಾರೆ. ಆದ್ದರಿಂದ ಈ ಕುರಿತು ಕೇಂದ್ರ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


ಕೆಆರ್‌ಎಸ್‌ನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಹೈಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಮಂಡ್ಯ ಜಿಲ್ಲಾಡಳಿತ ಈ ಆದೇಶ ಅನುಷ್ಠಾನಗೊಳಿಸಿ ಅಣೆಕಟ್ಟೆಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.


ಚುನಾವಣಾಧಿಕಾರಿ ವಿರುದ್ಧ ಸಿಎಂಗೆ ಪತ್ರ


ಯುವ ಮತದಾರರ ನೋಂದಣಿಗೆ ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಿರುವ ಮೈಸೂರು, ಕೊಡಗು ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಎಂ.ಲಕ್ಷ್ಮಣ್ ತಿಳಿಸಿದರು.


ಬಿಜೆಪಿ ಅನುಕೂಲಕ್ಕಾಗಿ ಹೀಗೆ ಮಾಡಲಾಗುತ್ತಿದೆಯೇ? ಕೇಂದ್ರ ಚುನಾವಣಾ ಆಯೋಗದಿಂದ ನಿರ್ದೇಶನ ಇದೆಯೇ? ಮನೆ ಮನೆಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು ನಿಮ್ಮ ಕರ್ತವ್ಯ ಅಲ್ಲವೇ ಎಂದು ಪ್ರಶ್ನಿಸಿದರು.


ಗ್ರಾಮಾಂತರ ಪ್ರದೇಶದವರು, ಬಡ ಯುವಕರಿಗೆ ಆನ್‌ಲೈನ್ ನೋಂದಣಿ ಕಷ್ಟವಾಗಲಿದೆ. ಅರ್ಜಿ ಕೊಟ್ಟು ನೋಂದಣಿಗೂ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net