ದೇವೇಗೌಡರ ಸೋಲಿನ ನೋವು ಮರೆಸಿ ; ಜನತಾ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮನವಿ

23TMK_JDS_HDK
Published on

ತುಮಕೂರು : ಲೋಕಸಭೆ ಚುನಾವಣೆಯ ಸೋಲು ದೇವೇಗೌಡರಿಗೆ ನೋವು ತಂದಿದ್ದು, ಆರೋಗ್ಯವೇ ಹದಗೆಟ್ಟಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಮೂಲಕ ಆ ನೋವು ಮರೆಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನಗರದ ಗಾಜಿನಮನೆಯಲ್ಲಿ ಮಂಗಳವಾರ ಜೆಡಿಎಸ್ ಆಯೋಜಿಸಿದ್ದ ‘ಜನತಾ ಸಂಗಮ’ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆ ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆ ಎಂದು ನಾವು ಊಹೆ ಕೂಡಾ ಮಾಡಿರಲಿಲ್ಲ, ಈ ಸೋಲಿಗೆ ಕಾರಣರಾದವರನ್ನು ಈ ಚುನಾವಣೆಯಲ್ಲಿ ಏನು ಮಾಡಬೇಕು ತೀರ್ಮಾನಿಸಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ರಾಜ್ಯದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ಕನಿಷ್ಠ 5 ಲೋಕಸಭಾ ಸ್ಥಾನದಲ್ಲಿ ಗೆಲುವು ಸಾಧಿಸುತ್ತಿದ್ದೆವು, ಕಾಂಗ್ರೆಸ್ ನಾಯಕರ ಕುತಂತ್ರದಿಂದಲೇ ನಾವು ಸೋತೆವು, 88ರ ವಯಸ್ಸಿನಲ್ಲಿ ನಮ್ಮ ತುಮಕೂರಿನಲ್ಲಿ ಸೋತಿದ್ದು ಕನಸಿನಲ್ಲಿಯೂ ಊಹೆ ಮಾಡಲಾಗದು, ದೇವೇಗೌಡರ ಸೋಲಿಗೆ ಪ್ರಮುಖ ಕಾರಣಕರ್ತರು ಈಗ ಕಣದಲ್ಲಿದ್ದಾರೆ, ಏನು ಮಾಡಬೇಕು ತೀರ್ಮಾನಿಸಿ ಎಂದರು.

ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲು ದೇವೇಗೌಡರ ಕೊಡುಗೆ ಇದೆ, ಈ ಹಿಂದೆ ಬೆಳ್ಳಾವಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ದೇವೇಗೌಡರು ಕಾರಣ, ಅನಾರೋಗ್ಯದ ನಡುವೆಯೂ ಪ್ರವಾಸ ಮಾಡಿ ಅಭ್ಯರ್ಥಿ ಗೆಲ್ಲಿಸಿದ್ದರು. ಆದರೂ, ಅವರ ವಿರುದ್ಧವೇ ಲಘುವಾಗಿ ಮಾತನಾಡಿದ್ದಾರೆ, ನಾವೇನು ಅನ್ಯಾಯ ಮಾಡಿದ್ದು? ದೇವೇಗೌಡರ ಬಗ್ಗೆ ಸಣ್ಣ ಭಾಷೆ ಉಪಯೋಗಿಸುವವರ ಬಗ್ಗೆ ನೀವೆ ತೀರ್ಮಾನಿಸಬೇಕು ಎಂದು ಭಾಷಣದುದ್ದಕ್ಕೂ ಕೆ.ಎನ್.ರಾಜಣ್ಣ ಅವರನ್ನು ಗುರಿಯಾಗಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನೀರಾವರಿ ಸೌಕರ್ಯಕ್ಕೆ ನಮ್ಮ ಕುಟುಂಬ ಎಂದೂ ವಿರೋಧ ಮಾಡಿಲ್ಲ, ಈ ಬಗ್ಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಿದರು, ಹೋರಾಟ ಮಾಡಿ ಹೇಮಾವತಿ ಡ್ಯಾಂ ಕಟ್ಟದಿದ್ರೆ ನೀರು ಎಲ್ಲಿಂದ ತರುತ್ತಿದ್ರೀ... ಜೆಡಿಎಸ್ ಎಂದೂ ಜಾತಿ ರಾಜಕಾರಣ ಮಾಡಲ್ಲ, ಬಡವರನ್ನು ಗೌರವಿಸುವ ಸಂಸ್ಕೃತಿ ನಮ್ಮದು ಎಂದರು.

ಮುಳ್ಳಿನ ಖುರ್ಚಿಯಲ್ಲಿ ಕುಳಿತು ಆಡಳಿತ ನಡೆಸಿದೆ: 2004ರಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ದೇವೇಗೌಡರು ಬಯಸಿದ್ದರು. ಆದರೆ, ಕಾಂಗ್ರೆಸ್ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಲಿಲ್ಲ, ಅಪಪ್ರಚಾರ ಮಾಡಿ ಸಿದ್ದರಾಮಯ್ಯ ಮನಸ್ಸಿನಲ್ಲಿ ವಿಷಬೀಜ ಬಿತ್ತಿದರು, ನಂತರದ ರಾಜಕೀಯ ಬೆಳವಣಿಗೆಗಳು ಪಕ್ಷಕ್ಕೆ ಆಘಾತವಾದರೂ ಕಾರ್ಯಕರ್ತರ ಪರಿಶ್ರಮದಿಂದ ಉಳಿದಿದೆ ಎಂದು ಕುಮಾರಸ್ವಾಮಿ ಭಾವುಕರಾದರು.

2018ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲವಾದ್ದರಿಂದ ಮುಳ್ಳಿನ ಖುರ್ಚಿಯಲ್ಲಿ ಕುಳಿತು ಆಡಳಿತ ನಡೆಸಿದೆ, ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಸಹಿಸಿಕೊಂಡು ಸರ್ಕಾರ ನಡೆಸಿದೆ ಎಂದರು.

ದೇವೇಗೌಡರ ಮಕ್ಕಳು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸರ್ಕಾರದಲ್ಲಿ ಕೃಷಿ, ಸಹಕಾರ ಇಲಾಖೆ ಏಕೆ ಕೇಳಲ್ಲ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ, ಹೌದು, ನಾನು ಹಣಕಾಸು ಇಲಾಖೆ ಕೇಳಿದ್ದು ರೈತರ ಸಾಲ ಮನ್ನಾ ಮಾಡಲು ಹಣ ಹೊಂದಿಸಲು, ಈ ಬಗ್ಗೆ ಆತ್ಮತೃಪ್ತಿಯಿದೆ, ದೇವೇಗೌಡರು ಜೀವನವನ್ನೆಲ್ಲಾ ರೈತ ಪರವಾದ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ ಎಂದರು.

ಅನುಕೂಲ ಪಡೆದವರಿಂದಲೇ ಅಪಪ್ರಚಾರ : ನಮ್ಮಿಂದ ಅನುಕೂಲ ಪಡೆದವರೇ ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ, ಈ ಚುನಾವಣೆ ಜೆಡಿಎಸ್‌ಗೆ ಪ್ರಮುಖವಾಗಿದ್ದು ಏಳು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇವೆ, ಚುನಾವಣೆ ಸವಾಲಾಗಿ ತೆಗೆದುಕೊಂಡು ಪಕ್ಷ ಉಳಿಸುವ ಜತೆಗೆ ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ನೀಡುವ ಜವಾಬ್ದಾರಿಯಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪಾಪದ ಹಣದ ಹೊಳೆಯೂ ಹರಿಯಲಿದೆ, ಆರು ಸ್ಥಾನ ನಾವು ಗೆಲ್ಲಲು ಸಾಧ್ಯತೆಯಿದೆ, ನಾವು ಪೂರ್ಣ ಬಹುಮತದಿಂದ ಅಧಿಕಾರಕ್ಕೇರಿದರೆ ಪಂಚರತ್ನ ಕಾರ್ಯಕ್ರಮ ಮಾಡುತ್ತೇವೆ. ಈಗ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ, ಕಳೆದೆರಡು ದಿನದಿಂದ ರಾಜ್ಯದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬೆಳೆ ನಷ್ಟವಾಗಿದೆ, ಲಿಂಗಸನೂರಿನಲ್ಲಿ ರೈತ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಸರ್ಕಾರಕ್ಕೆ ತಾಯಿ ಹೃದಯವಿದ್ದರೆ ಕೂಡಲೇ ರೈತರ ನೆರವುಗೆ ಬರಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಭ್ಯರ್ಥಿಗೆ ಅಡ್ರೆಸ್ ಇಲ್ಲ! : ಕುಮಾರಸ್ವಾಮಿ ಭಾಷಣದಲ್ಲಿ ಬಿಜೆಪಿ ವಿರುದ್ಧ ಮಾತನಾಡಲಿಲ್ಲ. ಆದರೆ, ಶಾಸಕ ಡಿ.ಸಿ.ಗೌರಿಶಂಕರ್ ಬಿಜೆಪಿ ಅಭ್ಯರ್ಥಿಗೆ ಜಿಲ್ಲೆಯಲ್ಲಿ ವಿಳಾಸವೇ ಇಲ್ಲ, ದೊಡ್ಡಬಳ್ಳಾಪುರ ಮೂಲದ ಅಭ್ಯರ್ಥಿ ಕೊರಟಗೆರೆಯವರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಕೊರಟಗೆರೆಯ ಮಗ ಈ ಚುನಾವಣೆಯಲ್ಲಿ ಕೊರಟಗೆರೆ, ಮಧುಗಿರಿಯಲ್ಲಿ ನಾನೇ ಬಂದು ಕೂರುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಂಬಿ ಕೆಟ್ಟಿದ್ದೇವೆ, ಈಗ ಸರಿಪಡಿಸಿಕೊಂಡು ನಮ್ಮ ಅಭ್ಯರ್ಥಿ ಗೆಲ್ಲಿಸೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net