

ಮಂಗಳೂರು : ಸಹಕಾರ ಸಂಘಗಳ ಹಾಗೂ ಸಹಕಾರಿ ಬ್ಯಾಂಕ್‌ಗಳ ನೇಮಕಾತಿ ಮತ್ತು ಉನ್ನತ ಹುದ್ದೆಗೆ ಪದೋನ್ನತಿ ನೀಡುವಾಗ ಅರ್ಹತೆಯಲ್ಲಿ ಹಾಗೂ ನಗರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ ನಿರ್ದೇಶಕರ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಅರ್ಹತೆ ನಿಗದಿ ಪಡಿಸಿ ಬ್ಯಾಂಕಿಂಗ್ ಶಿಕ್ಷಣ ಕಡ್ಡಾಯವೆಂದು ರಾಜ್ಯ ಸರ್ಕಾರದ ಸಹಕಾರ ಕಾಯ್ದೆಯು ಆದೇಶ ಹೊರಡಿಸಿದೆ.
ಮುಂದಿನ ದಿನಗಳಲ್ಲಿ ಹೈಯರ್ ಡಿಪ್ಲೊಮಾ ಇನ್ ಕೋ-ಒಪರೇಟಿವ್ ಮ್ಯಾನೇಜ್‌ಮೆಂಟ್ (ಎಚ್‌ಡಿಸಿಎಂ) ಶಿಕ್ಷಣದ
ಅಗತ್ಯವಿದ್ದು, ನಗರದ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘವು ಈ ಕೋರ್ಸ್ ನಡೆಸುತ್ತಾ ಬಂದಿದೆ. ಜಿಲ್ಲೆಯ ಸಹಕಾರ ಸಂಘಗಳ ಎಲ್ಲ ಸಿಬ್ಬಂದಿಗೆ ದೂರ ಶಿಕ್ಷಣ ಮಾದರಿಯಲ್ಲಿ ಮಂಗಳೂರು ಕೇಂದ್ರಿಕೃತವಾಗಿ ತರಗತಿಗಳು, ಮೌಖಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳು ನಡೆಯಲಿದ್ದು ಉನ್ನತ ಡಿಪ್ಲೊಮಾ ಶಿಕ್ಷಣ ಪಡೆಯಲು ಅನುಕೂಲಕರವಾಗಲಿದೆ.
ತರಗತಿಗಳು ಮತ್ತು ಎಲ್ಲ ಪರೀಕ್ಷೆಗಳು ರಜಾ ದಿನಗಳಂದು ನಡೆಯಲಿರುವುದರಿಂದ ಸಹಕಾರ ಸಂಘಗಳ ಸಿಬ್ಬಂದಿ ಜತೆಗೆ ಪದವಿ ಪೂರೈಸಿರುವ ಸಹಕಾರಿ ಸಂಘದ ಉದ್ಯೋಗ ಆಕಾಂಕ್ಷಿಗಳಿಗೂ ಈ ಶಿಕ್ಷಣ ಪೂರಕವಾಗಲಿದೆ. ಆರು ತಿಂಗಳ ಅವಧಿಯ ಕೋರ್ಸ್‌ನಲ್ಲಿ 13 ವಿಷಯ ಹೊಂದಿದ್ದು ಎರಡು ಸೆಮಿಸ್ಟರ್‌ನಲ್ಲಿ ತರಬೇತಿ ನಡೆಯಲಿದೆ.
ಪ್ರಾದೇಶಿಕ ಸಹಕಾರ ನಿರ್ವಹಣಾ ಕೇಂದ್ರ ಬೆಂಗಳೂರು ಇವರು ನೀಡುತ್ತಿರುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ ದೂರ ಶಿಕ್ಷಣ ಕೋರ್ಸ್‌ನ್ನು ಮಂಗಳೂರು ಕೇಂದ್ರಿತವಾಗಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಈಗಾಗಲೇ 7 ಬ್ಯಾಚ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮುಂದಿನ ಬ್ಯಾಚ್‌ಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಆಸಕ್ತ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಪದವೀದರರು ಕೋರ್ಸ್‌ನ ವಿವರಗಳನ್ನು ಮತ್ತು ಅರ್ಜಿಯನ್ನು ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಹತ್ತಿರದ ಶಾಖೆಯಲ್ಲಿ ಪಡೆದು ಭರ್ತಿ ಮಾಡಿ ನಿಗದಿತ ಶುಲ್ಕದೊಂದಿಗೆ ಮೇ 30ರೊಳಗೆ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ, ಆತ್ಮಶಕ್ತಿ ಸೌಧ, ಬೈರಾಡಿಕೆರೆಯ ಹತ್ತಿರ, ಪಡೀಲ್, ಮಂಗಳೂರು-7 ಅಥವಾ ಸಂಘದ ಹತ್ತಿರದ ಶಾಖೆಗೆ ತಲುಪಿಸಬೇಕು. ಮೊದಲು ನೋಂದಣಿ ಮಾಡುವ 100 ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0824-2003355, 8151057555 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.