ಎಚ್‌ಡಿಸಿಸಿ ಮತ್ತೆ ಜೆಡಿಎಸ್ ತೆಕ್ಕೆಗೆ

ಎಚ್‌ಡಿಸಿಸಿ ಮತ್ತೆ ಜೆಡಿಎಸ್ ತೆಕ್ಕೆಗೆ
Published on

ಹಾಸನ: ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಜೆಡಿಎಸ್ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಜೆಡಿಎಸ್ ಹಿಡಿತ ಸಾಧಿಸಿದೆ.

ಚನ್ನರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಹೊಳೆನರಸೀಪುರ ತಾಲೂಕಿನಿಂದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬ್ಯಾಂಕಿನ ಹಾಲಿ ಅಧ್ಯಕ್ಷ, ಸೋಮನಹಳ್ಳಿ ನಾಗರಾಜು, ಅರಕಲಗೂಡು ತಾಲೂಕಿನಿಂದ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಬೇಲೂರು ತಾಲೂಕಿನಿಂದ ಮಾಜಿ ಉಪಾಧ್ಯಕ್ಷ ಹಾಲಿ, ನಿರ್ದೇಶಕ ಎಂ.ಎನ್.ನಾಗರಾಜು, ಆಲೂರು-ಸಕಲೇಶಪುರ ತಾಲೂಕು ಕ್ಷೇತ್ರದಿಂದ ಕಬ್ಬಿನಹಳ್ಳಿ ಜಗದೀಶ್, ಸಗಟು ಮಾರಾಟ ಮಳಿಗೆಗಳು ಹಾಗೂ ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ಹಾಲಿ ನಿರ್ದೇಶಕ ಬಿದರಿಕೆರೆ ಜಯರಾಮ್, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಕ್ಷೇತ್ರದಿಂದ ಎಚ್.ಎನ್.ದೇವೇಗೌಡ (ಪಾಪಣ್ಣಿ) ಮರು ಆಯ್ಕೆಯಾಗಿದ್ದಾರೆ.

ಉಳಿದಂತೆ ಹಾಸನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಹನುಮೇಗೌಡ, ಅರಸೀಕೆರೆ ತಾಲೂಕಿನಿಂದ ಶೇಖರಪ್ಪ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಎಸ್.ಮಂಜೇಗೌಡ, ಗಂಡಸಿ ಗಂಗಾಧರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 13 ಸ್ಥಾನದಲ್ಲಿ 12 ನಿರ್ದೇಶಕರು ಅವಿರೋಧ ಆಯ್ಕೆಯಾಗಿರುವುದರಿಂದ ಎಚ್‌ಡಿಸಿಸಿ ಬ್ಯಾಂಕ್ ಆಡಳಿತ ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ಒಲಿದಿದೆ.

ಇನ್ನೊಂದು ಕ್ಷೇತ್ರಕ್ಕೆ ಮಾತ್ರ ಚುನಾವಣೆ: ಹಾಲಿ ನಿರ್ದೇಶಕ ಗಿರೀಶ್ ಚನ್ನವೀರಪ್ಪ ಅವರು ಸ್ಪರ್ಧೆಗಿಳಿದಿರುವ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ಕ್ಷೇತ್ರದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ರುದ್ರೇಶ್ ಎದುರಾಳಿಯಾಗಿದ್ದಾರೆ. ಹೀಗಾಗಿ ಈ ಒಂದು ಕ್ಷೇತ್ರಕ್ಕೆ ಮಾತ್ರ ಚುನಾವಣೆ ನಡೆಯುವುದು ಅನಿವಾರ್ಯವಾಗಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಒಟ್ಟು 45 ಮತದಾರರಿದ್ದು, ಯಾರು ಹೆಚ್ಚು ಮತದಾರರ ಮನವೊಲಿಸಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net