ವಿಜಯೇಂದ್ರಗೆ ಮಹತ್ವದ ಸ್ಥಾನ ನೀಡಲು ಪ್ರಧಾನಿಗೆ ಮನವಿ ಮಾಡ್ತೇನೆ ಎಂದ್ರು ರೇವಣ್ಣ

HD Revanna
Published on


ಹಾಸನ: ಉಪ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನೇ 2023ರ ಚುನಾವಣಾ ರೂವಾರಿಯನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆಯಲ್ಲಿ ವಿಜಯೇಂದ್ರ ಪಾತ್ರ ದೊಡ್ಡದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನ. 1 ರಂದು ಚುನಾವಣಾ ಕ್ಷೇತ್ರದಿಂದ ಹೊರ ಜಿಲ್ಲೆಯ ಎಲ್ಲರೂ ಮೂಲ ಸ್ಥಾನಕ್ಕೆ ತೆರಳಬೇಕೆಂದು ಚುನಾವಣಾ ಆಯೋಗ ಸೂಚಿಸಿದರೆ ವಿಜಯೇಂದ್ರ ಹಾಗೂ ಅವರ ತಂಡ ಆ ದಿನವೇ ಕ್ಷೇತ್ರಕ್ಕೆ ಕಾಲಿಟ್ಟು ಏನು ಮಾಡಬೇಕೋ ಅದನ್ನೆಲ್ಲ ಮಾಡಿದೆ. ಹೀಗಿದ್ದರೆ ಮತದಾನ ಏಕೆ ಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.


ಎರಡೂ ರಾಷ್ಟ್ರೀಯ ಪಕ್ಷಗಳ ಹಗ್ಗಜಗ್ಗಾಟದಿಂದ ಬೇಸತ್ತು ಜೆಡಿಎಸ್ ಮತದಾರರು ಮತದಾನಕ್ಕೆ ಬರಲಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್‌ನ 60 ಸಾವಿರ ಮತದಾರರು ಮತದಾನ ದಿನ ಮನೆಯಿಂದ ಹೊರಗೆ ಬರಲಿಲ್ಲ. ಶಿರಾದಲ್ಲಿ ಮೂರು ಸಾರಿ ಕ್ಷೇತ್ರದ ಜನರೇ ದುಡ್ಡು ಖರ್ಚು ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಜೆಡಿಎಸ್ ಬಡಜನರ ಹೃದಯದಲ್ಲಿದ್ದು ಜನಸೇವೆಗೆ ನಾವು ಸದಾ ಸಿದ್ಧರಾಗಿದ್ದೇವೆ. ಇನ್ನಾದರೂ ಬಿಜೆಪಿ ದ್ವೇಷ ರಾಜಕಾರಣ ಬಿಟ್ಟು ಶಿರಾ ಜನತೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕೇವಲ ಎರಡು ಸ್ಥಾನದಿಂದ ಪಾರ್ಲಿಮೆಂಟ್ ವರೆಗೂ ತಲುಪಿದ್ದ ಪ್ರಾದೇಶಿಕ ಪಕ್ಷವನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net