ಮಂಡ್ಯಕ್ಕೆ ಒಲಿದ ಕೇಂದ್ರ ಸಚಿವ ಸ್ಥಾನ: ಪ್ರಮಾಣ ವಚನ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ

hdk
Published on

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ದರ್ಜೆ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಕ್ಷೇತ್ರದಿಂದ ಕೇಂದ್ರ ಸಚಿವರಾದ ನಾಲ್ಕನೇ ಸಂಸದ ಎನ್ನುವ ದಾಖಲೆ ಬರೆದಿದ್ದಾರೆ. ಇದಕ್ಕೂ ಮಿಗಿಲಾಗಿ ಮತ್ತೊಮ್ಮೆ ಜಿಲ್ಲೆಯ ಜನರು ಎಚ್‌ಡಿಗೆ ಅವರಿಗೆ ಅಧಿಕಾರ ಕೊಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಜೆಡಿಎಸ್‌ಗೆ ಇದೀಗ ಶುಕ್ರದೆಸೆ ಪ್ರಾರಂಭವಾಗಿದೆ. ಅದರಂತೆ ಸತತವಾಗಿ ನಾಲ್ಕು ಪ್ರಮುಖ ಚುನಾವಣೆ ಸೋತು ಅಸ್ಥಿತ್ವಕ್ಕೆ ಪರದಾಡುತ್ತಿದ್ದ ದಳಕ್ಕೆ ಮರುಜೀವ ಸಿಕ್ಕಿದೆ. ಮಾತ್ರವಲ್ಲದೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವ ಸ್ಥಾನವೂ ಒಲಿದುಬಂದಿದೆ. ಇದರೊಂದಿಗೆ ಎಚ್‌ಡಿಕೆ ರಾಜಕೀಯದ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದ್ದಾರೆ.
ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಈವರೆಗೆ ಮೂವರು ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲ್ಲುವ ನಟ ರೆಬಲ್‌ಸ್ಟಾರ್ ಅಂಬರೀಷ್ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಸಂಸದರಾಗಿ ಚುನಾಯಿತರಾದ ಎಸ್.ಎಂ.ಕೃಷ್ಣ 1983-84ರ ಅವಧಿಯಲ್ಲಿ ಕೇಂದ್ರ ಕೈಗಾರಿಕಾ ಹಾಗೂ ಹಣಕಾಸು ರಾಜ್ಯ ಖಾತೆ ಸಚಿವರಾಗಿದ್ದರು. ಜತೆಗೆ 2010ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡು ಕೇಂದ್ರದ ವಿದೇಶಾಂಗ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಂತೆಯೇ 2009ರಲ್ಲಿ ರೆಹಮಾನ್‌ಖಾನ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಇವರ ಸಾಲಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರ್ಪಡೆಯಾಗಿದ್ದಾರೆ.
ಮೂರನೇ ಬಾರಿಗೆ ಅಧಿಕಾರ: ಗಮನಾರ್ಹ ಅಂಶವೆಂದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಏರಲು ಮಂಡ್ಯ ಜಿಲ್ಲೆಯ ಜನರು ಆರ್ಶೀವಾದ ಮಾಡಿದ್ದಾರೆ. 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವೇಳೆ ಒಪ್ಪಂದದಂತೆ ಎರಡನೇ ಅವಧಿಯ ಅಂದರೆ 2006ರಲ್ಲಿ ಎಚ್‌ಡಿಕೆ ಮುಖ್ಯಮಂತ್ರಿಯಾಗುತ್ತಾರೆ. ಅಂದಿನ ಚುನಾವಣೆಯಲ್ಲಿ 9 ಕ್ಷೇತ್ರದ ಪೈಕಿ ಆರು ಕ್ಷೇತ್ರದ ಅಂದರೆ ನಾಗಮಂಗಲ, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗುತ್ತಾರೆ. ಇದರ ಪರಿಣಾಮ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಎಚ್‌ಡಿಕೆ ಸಿಎಂ ಹುದ್ದೆ ಅಲಂಕರಿಸುತ್ತಾರೆ.

ಇದಾದ ಬಳಿಕ 2018ರವರೆಗೂ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್‌ಗೆ ಸಾಧ್ಯವಾಗಲಿಲ್ಲ. ಈ ನಡುವೆ ರಾಜಕೀಯ ಧ್ರುವೀಕರಣ ನಡೆದ ಹಲವು ನಾಯಕರು ದಳ ತೊರೆಯುತ್ತಾರೆ. ಈ ನಡುವೆ ಎದುರಾಗುವುದು 2018ರ ವಿಧಾನಸಭಾ ಚುನಾವಣೆ. ಇದು ಎಚ್‌ಡಿಕೆ ಅವರಿಗೆ ಮತ್ತೊಮ್ಮೆ ರಾಜಕೀಯವಾಗಿ ಪುನರ್ಜನ್ಮ ಕೊಟ್ಟ ಚುನಾವಣೆ ಎಂದರೂ ತಪ್ಪಾಗಲಾರದು. ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಭೂತಪೂರ್ವ ಬೆಂಬಲ ಸಿಗುತ್ತದೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಶಾಸಕರನ್ನು ಜನರು ಆಯ್ಕೆ ಮಾಡುತ್ತಾರೆ. ಅದು ಕೂಡ ದಾಖಲೆಯ ಮತಗಳ ಅಂತರದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಈ ಅವಧಿಯಲ್ಲಿ ಮತ್ತೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತದೆ. ಅದರಂತೆ ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆಗುತ್ತಾರೆ. ಆದರೆ ಕೆಲ ತಿಂಗಳ ಅವಧಿಯಲ್ಲಿಯೇ ಮೈತ್ರಿ ಸರ್ಕಾರ ಅಸ್ಥಿತ್ವ ಕಳೆದುಕೊಳ್ಳುತ್ತದೆ.
ಇನ್ನು 2023ರ ವಿಧಾನಸಭಾ ಚುನಾವಣೆ ಜೆಡಿಎಸ್ ಪಾಲಿಗೆ ಕರಾಳ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಜಿಲ್ಲೆಯ ಏಳು ಕ್ಷೇತ್ರದ ಪೈಕಿ ಒಂದರಲ್ಲಿ ಮಾತ್ರ ಜೆಡಿಎಸ್ ಗೆಲುವು ಕಾಣಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೂ ಒಟ್ಟಾರೆ ಸ್ಥಾನ 20ಕ್ಕಿಂತ ಕಡಿಮೆಗೆ ಕುಸಿಯುತ್ತದೆ. ಇದರಿಂದಾಗಿ ಜೆಡಿಎಸ್ ಪರಿಸ್ಥಿತಿ ಊಹಿಸಲು ಸಾಧ್ಯವಾಗದಂತಾಗುತ್ತದೆ. ಹೀಗಿರುವಾಗಲೇ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ಪರ್ಧೆ ಮಾಡುವಂತೆ ಕ್ಷೇತ್ರದ ಜನರು ಒತ್ತಾಯಿಸುತ್ತಾರೆ. ಅದರಂತೆ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಎಚ್‌ಡಿಗೆ ಅವರಿಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. 2.80 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಸೋಲಿಸಿ ಇದೀಗ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಷೇತ್ರದ ಜನರ ಅಭೂತಪೂರ್ವ ಬೆಂಬಲ ಜೆಡಿಎಸ್ ಪಾಲಿಗೆ ದೊಡ್ಡ ಉಡುಗೊರೆಯಾಗಿದೆ.

ಕಣ್ತುಂಬಿಕೊಂಡ ಕ್ಷೇತ್ರದ ಜನರು
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಹಾಗೂ ಎಚ್‌ಡಿಕೆ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣವನ್ನು ಕ್ಷೇತ್ರದ ಜನರು ಕಣ್ತುಂಬಿಕೊಂಡರು. ಜಿಲ್ಲೆಯ ಅಲ್ಲಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಿ ಪ್ರಮಾಣ ವಚನ ಸ್ವೀಕರಿಸುವ ದೃಶ್ಯವನ್ನು ನೋಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಜನರು ೋಷಣೆ ಕೂಗಿ ಸಂಭ್ರಮಿಸಿದರು. ಮಾತ್ರವಲ್ಲದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಯೋಷ ಮೊಳಗಿಸಿದರು. ಇನ್ನು ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿಯೇ ಭಾಗವಹಿಸಿ ಎಚ್‌ಡಿಕೆಗೆ ಅವರಿಗೆ ಶುಭಾಷಯ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net