

ಮಂಡ್ಯ: ಬಿಜೆಪಿ ಅವರಿಂದ ನಾನು ಹಿಂದು ಎಂದು ಪ್ರಮಾಣ ಪತ್ರ ಪಡೆಯಲು ಎದೆಬಗೆದು ತೋರಿಸುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಆರ್ಎಸ್ಎಸ್ ಸಂಘಟನೆ ಮೇಲಿನ ಕೇಸ್‌ಗಳನ್ನು ವಾಪಾಸ್ ಪಡೆಯಲು. ನಾನು ಹಿಂದು ಎನ್ನುವುದಕ್ಕೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಅವರಿಗಿಂತಲೂ ದೊಡ್ಡಮಟ್ಟದಲ್ಲಿ ನಮ್ಮ ಕುಟುಂಬ ಹಿಂದು ಸಂಸ್ಕೃತಿ ಆಚರಣೆ ಮಾಡುತ್ತದೆ. ದೇವೇಗೌಡರ ಕುಟುಂಬ ಅಂದರೆ ದೇಶದಲ್ಲೇ ಹಿಂದು ಸಂಸ್ಕೃತಿ ಎತ್ತಿಹಿಡಿಯುವ ಕುಟುಂಬವಾಗಿದೆ. ಹಿಂದು ಎಂಬ ಪ್ರಮಾಣ ಪತ್ರ ಪಡೆಯಲು ಎದೆಬಗೆದು ತೋರಿಸುವ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು.
ದೇವಾಲಯದ ಜೀರ್ಣೋದ್ಧಾರ ಹಾಗೂ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಡ್ಯಕ್ಕೆ ಬಂದಿದ್ದೇನೆ. ಮಂಡ್ಯಕ್ಕೆ ಪ್ರತಿನಿತ್ಯ ಬರದಿದ್ರು ಜಿಲ್ಲೆಯ ಹಾಗು-ಹೋಗುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಬಿಜೆಪಿ ಸರ್ಕಾರ ಬಂದ ನಂತರ ಮೈತ್ರಿ ಸರ್ಕಾರದಲ್ಲಿ ಮಂಡ್ಯಕ್ಕೆ ಕೊಟ್ಟ ಅನುದಾನಗಳನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ನಾನೇ ಖುದ್ದಾಗಿ ತೆರಳಿ ಮದುವೆಗೆ ಆಹ್ವಾನ ಮಾಡುತ್ತೇನೆ
ನಿಖಿಲ್ ಮದುವೆ ವಿಚಾರವಾಗಿ ಮಾತನಾಡಿ, ರಾಮನಗರ-ಚನ್ನಪಟ್ಟಣ ನಡುವೆ ನಿಖಿಲ್ ಮದುವೆ ನಡೆಯಲಿದೆ. ಮಂಡ್ಯ ಜಿಲ್ಲೆಗೆ ಹತ್ತಿರವಾಗುವ ಕಾರಣಕ್ಕೆ ರಾಮನಗರ- ಚನ್ನಪಟ್ಟಣ ನಡುವೆ ಮದುವೆ ಮಾಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆಯ ಪ್ರತಿಮನೆಗೂ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುತ್ತದೆ. ಮಂಡ್ಯ ಜನರ ಆಶೀರ್ವಾದ ನಿಖಿಲ್‌ಗೆ ಬೇಕಿದೆ. ಎಷ್ಟು ಸಾಧ್ಯವಾಗುತ್ತೋ ಅಷ್ಟು ನಾನೇ ಖುದ್ದಾಗಿ ತೆರಳಿ ಮದುವೆಗೆ ಆಹ್ವಾನ ಮಾಡುತ್ತೇನೆ. ನನ್ನ ಬೆಳೆಸಿದ ಜನರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮದುವೆಯ ಹಿನ್ನೆಲೆಯಲ್ಲಿ ಒಂದೊಳ್ಳೆ ಊಟ ಹಾಕಿಸಬೇಕೆಂದಿದ್ದೇನೆ ಎಂದರು.
ಬಜೆಟ್ ಅಭಿವೃದ್ಧಿ ಪರವಾಗಿರಲಿದೆ ಎಂಬ ನಂಬಿಕೆ ಇಲ್ಲ
ರಾಜ್ಯ ಬಜೆಟ್ ವಿಚಾರವಾಗಿ ಕೇಂದ್ರ ಸರ್ಕಾರದ ಬಜೆಟ್ ನೋಡಿದ ಮೇಲೆ ರಾಜ್ಯದ ಬಜೆಟ್ ಅಭಿವೃದ್ಧಿ ಪರವಾಗಿರಲಿದೆ ಎಂಬ ನಂಬಿಕೆ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣವೂ ಬರದಂತ ಸ್ಥಿತಿ ಇದೆ. ಹಾಗಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಪೂರಕವಾದ ಬಜೆಟ್ ನೀಡಲಿದೆ ಎಂಬ ನಿರೀಕ್ಷೆ ನನಗಿಲ್ಲ ಎಂದರು.
ಅಧಿಕಾರ ಇಲ್ಲಿ ಶಾಶ್ವತವಲ್ಲ
ನಾರಾಯಣಗೌಡ ಸಚಿವರಾಗುತ್ತಿರುವುದರ ಬಗ್ಗೆ ಮಾತನಾಡಿ, ಕಾಲಚಕ್ರ ಉರುಳುತ್ತಿರುತ್ತದೆ. ಅಧಿಕಾರ ಇಲ್ಲಿ ಶಾಶ್ವತವಲ್ಲ. ಮಂತ್ರಿಗಳಾಗುತ್ತಾರೆ ಹಾಗೂ ಹೋಗುತ್ತಾರೆ. ಮಂತ್ರಿಯಾಗೋದು ದೊಡ್ಡ ಸಾಧನೆ ಎಂದು ನನಗೆ ಅನಿಸುವುದಿಲ್ಲ. ಆದರೆ, ಆ ಸ್ಥಾನದ ಸದುಪಯೋಗ ಪಡೆದು ತನ್ನನ್ನು ನಂಬಿದ ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡಿದರೆ ಸಾಕೆಂದರು.
ಕೆಲವರ ರಾಜಕೀಯದಲ್ಲಿ ಏಳುಬೀಳಗಳಿರುತ್ತದೆ
ಹಳ್ಳಿ ಹಕ್ಕಿ ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಕೆಲವರ ರಾಜಕೀಯದಲ್ಲಿ ಏಳುಬೀಳಗಳಿರುತ್ತದೆ. ಬಿದ್ದಾಗ ಹೆದರಿ ಕೂರುವ ಅವಶ್ಯಕತೆ ಇಲ್ಲ. ಜನಗಳ ಕಷ್ಟ ಸುಖಗಳಿಗೆ ಸ್ಪಂದಿಸಿದರೆ ಅವರೇ ಮೇಲೆತ್ತುತ್ತಾರೆ ಎಂದು ಹೇಳುವ ಮೂಲಕ ವಿಶ್ವನಾಥ್ ಬಗ್ಗೆ ಎಚ್ಡಿಕೆ ಸಾಫ್ಟ್ ಕಾರ್ನರ್ ತೋರಿದರು. (ದಿಗ್ವಿಜಯ ನ್ಯೂಸ್)