ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ಧಿಮತ್ತೆ ಹೆಚ್ಚಾಗಬೇಕೇ ವಿನಃ ಗರ್ವ ಬರಬಾರದು

HDK
Published on

ಬೆಂಗಳೂರು: ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಲೇವಡಿ ಮಾಡಿದ್ದ ಬಿಜೆಪಿ ನಾಯಕ ಸಿ.ಟಿ.ರವಿ ವಿರುದ್ಧ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ಧಿಮತ್ತೆ ಕೂಡ ಹೆಚ್ಚಾಗಬೇಕೇ ವಿನಃ ಗರ್ವ ಬರಬಾರದು. ಆದರೆ, ಸಿ.ಟಿ.ರವಿಯವರ ಮಾತುಗಳು ಆ ಹಂತ ತಲುಪಿದಂತೆ ಭಾಸವಾಗುತ್ತದೆ. ಬಳಸುವ ಭಾಷೆ ಅದನ್ನು ಪ್ರತಿಧ್ವನಿಸುತ್ತಿದೆ.

ಸಿ.ಟಿ.ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡಕತ್ತರಿಸುವ ಆತಂಕದಿಂದ ಹಾಗೂ ಬಿಜೆಪಿಯಲ್ಲಿನ ವೈರುದ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗೆಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಎಚ್​ಡಿಕೆ ಟೀಕಿಸಿದರು.

ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು

ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,

ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ,

ಕೂಡಲಸಂಗಮದೇವಾ ಅನ್ಯವೆಂಬುದನರಿಯೆನಯ್ಯಾ... ಎಂಬ ಬಸವಣ್ಣನವರ ವಚನ ಮೂಲಕ ಸಿ.ಟಿ. ರವಿ ಕಾಲೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net