ಹುಬ್ಬಳ್ಳಿ: ಬಿಜೆಪಿಯಲ್ಲಿನ ಬಣ ರಾಜಕೀಯದಿಂದ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ಆ ಪಕ್ಷದ ಆಂತರಿಕ ವಿಷಯ. ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವಂತೆ ಬಿಜೆಪಿ ಸ್ನೇಹಿತರಿಗೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ, ಗೊಂದಲ ನಿವಾರಣೆ ಮಾಡುವಷ್ಟು ಆ ಪಕ್ಷದ ವರಿಷ್ಠರು ಬಲಿಷ್ಠರಾಗಿದ್ದಾರೆ. ಎಲ್ಲರೂ ಒಟ್ಟಾಗಿದ್ದು, ಶೀಘ್ರ ಎಲ್ಲವೂ ಸುಗಮವಾಗಿ ಬಗೆ ಹರಿಯುವ ವಿಶ್ವಾಸವಿದೆ ಎಂದರು.
ದೆಹಲಿ ವಿಧಾನಸಭೆ ಫಲಿತಾಂಶ ನಿರೀಕ್ಷಿತವಾಗಿತ್ತು. ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರಿನಲ್ಲಿ ರಾಜಕೀಯಕ್ಕೆ ಬಂದು ಅಧಿಕಾರ ಅನುಭವಿಸಿದ ಆಮ್ ಆದ್ಮಿ ಪಕ್ಷದ ಮುಖಂಡರು ಕಳೆದ ಹತ್ತು ವರ್ಷ ಜನರಿಗಾಗಿ ಏನನ್ನೂ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಅಭಿವೃದ್ಧಿ ಕಡೆಗಣಿಸಲಾಗಿತ್ತು. ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಜನ ಆಕ್ರೋಶಗೊಂಡಿದ್ದರು. ಇದೀಗ ದೆಹಲಿ ಅಭಿವೃದ್ಧಿ ವಿಚಾರದಲ್ಲಿ ಜನತೆ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗುವ ವಿಚಾರ ಸದ್ಯ ನಮ್ಮ ಮುಂದೆ ಇಲ್ಲ. ಪಕ್ಷ ಸಂಘಟನೆ ಆಗಬೇಕು ಎಂಬುದು ಎಲ್ಲರ ಭಾವನೆ. ಸಂಸತ್ ಅಧಿವೇಶನದ ಬಳಿಕ ಈ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.
ಕಾಂಗ್ರೆಸ್ ದಬ್ಬಾಳಿಕೆ:
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಜಾಗಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಅಧಿಕಾರ ಇದೆ ಎಂದು ದಬ್ಬಾಳಿಕೆ ನಡೆಸಿದೆ. ಜಾಗದ ಮೂಲ ದಾಖಲೆಗಳನ್ನು ತೆಗೆಸಲು ಹೇಳಿದ್ದೇನೆ. ದಾಖಲೆ ಸಿಕ್ಕ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.