

ಮೈಸೂರು: ರಸ್ತೆ ಕಾಮಗಾರಿಯಲ್ಲಿ ಕರ್ತವ್ಯ ಲೋಪ ಎಸಗಿರುವ ಎಚ್.ಡಿ.ಕೋಟೆ ಪುರಸಭೆಯ ಕಿರಿಯ ಇಂಜಿನಿಯರ್ ಕೆ.ಸುರೇಶ್ ಅವರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತು ಮಾಡಲಾಗಿದೆ.
ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಈ ಕ್ರಮ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ನಂತರ ಬಿಲ್ ಪಾವತಿಗೆ ಸೂಚಿಸಲಾಗಿತ್ತು.
ಒಟ್ಟು ಮೂರು ಕಾಮಗಾರಿಗಳಿದ್ದವು. ರಸ್ತೆಯ ದಪ್ಪ 75 ಎಂಎಂ ಡಾಂಬರು ರಸ್ತೆ, ಕಾಂಕ್ರಿಟ್ ರಸ್ತೆ 150 ಎಂಎಂ ಅಳತೆ ಇದೆ ಎಂದು ನಮೂದಿಸಲಾಗಿದೆ. ಆದರೆ, ವಾಸ್ತವಿಕವಾಗಿ ಸ್ಥಳದಲ್ಲಿ ಡಾಂಬರ್ ರಸ್ತೆ 55 ಎಂಎಂ, ಕಾಂಕ್ರಿಟ್ ರಸ್ತೆ 100 ಎಂಎಂ ದಪ್ಪ ಇತ್ತು.
ಸುರೇಶ್ ಈ ಕಾಮಗಾರಿಗಳ ಮೇಲಸ್ತುವಾರಿ ಮಾಡಿದ್ದರು. ಆದರೆ, ಪರಿಶೀಲಿಸದೆ ಅಳತೆ ಪುಸ್ತಕಕ್ಕೆ ಸಹಿ ಮಾಡಿ ಬಿಲ್ ಸಲ್ಲಿಸಲಾಗಿದೆ. ಇದು ಕರ್ತವ್ಯ ಲೋಪವಾಗಿದೆ.
ಅನುದಾನವನ್ನೂ ದುರುಪಯೋಗ ಪಡೆಸಿಕೊಳ್ಳುವ ಉದ್ದೇಶವೂ ಕಾಮಗಾರಿಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.