ನಾಡಿನ ಸವಾರ್ಂಗೀಣ ಬೆಳವಣಿಗೆಗೆ ಸಂಕಲ್ಪ ಮಾಡಿ

KA sa PA- HDK
Published on

ಎಚ್.ಡಿ. ಕೋಟೆ : ಕನ್ನಡನಾಡಿನ ಸವಾರ್ಂಗೀಣ ಬೆಳವಣಿಗೆಗೆ ಕನ್ನಡಿಗರು ಸಂಕಲ್ಪ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೃಪಾ ಗಣೇಶ್ ಹೇಳಿದರು. ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ಎಂ.ಎಂ.ಕೆ. ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ತಾಲೂಕು ಕಸಾಪ ಹಮ್ಮಿಕೊಂಡಿದ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅನನ್ಯ ಮತ್ತು ಅಸ್ಮಿತೆಯ ಸಂಸ್ಥೆಯಾಗಿದೆ. ಕನ್ನಡನಾಡಿನ ಸವಾರ್ಂಗೀಣ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು. ಕಸಾಪ ಎಂಬುದು ಕನ್ನಡಿಗರ ತನು, ಮನ, ಧನದಿಂದ ಬೆಳೆದ ಸಂಘಟನೆ. ಸಣ್ಣದಾಗಿ ಪ್ರಾರಂಭವಾದರೂ ಇಂದು 4 ಲಕ್ಷ ಸದಸ್ಯರನ್ನು ಹೊಂದಿ ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲೂ ಶಾಖೆಗಳನ್ನು ಹೊಂದಿದ ಕೀರ್ತಿಗೆಭಾಜನವಾಗಿದೆ ಎಂದರು.

ಕಸಾಪ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಗರ್ಭಗುಡಿಯಾಗಿದೆ ಎಂದರು. 7 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವುದು ಹೆಮ್ಮೆ. ದೂರದೃಷ್ಟಿಯನ್ನು ಇಟ್ಟುಕೊಂಡು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 111 ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆ ಇಂದು ಸಾಗರದಾಚೆಗೂ ಬೆಳೆದು ಕನ್ನಡದ ಹಿರಿಮೆಯನ್ನು ಪ್ರಚಾರ ಮಾಡುತ್ತಿದೆ ಎಂದರು.

ಕನ್ನಡ ಪತ್ರಿಕೆಗಳನ್ನು ಓದಿ: ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಎಲ್ಲರಲ್ಲೂ ಮೂಡಬೇಕು. ಈ ಮೂಲಕವೂ ನಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕನ್ನಡ ಪತ್ರಿಕೆಗಳನ್ನು ಪ್ರತಿ ಮನೆಯವರೂ ಕೊಂಡು ಓದಿದರೆ ಕನ್ನಡ ಭಾಷಾ ಪತ್ರಿಕೆಗಳ ಬೆಳವಣಿಗೆಗೂ ಕೊಡುಗೆ ನೀಡಿದಂತಾಗುತ್ತದೆ ಎಂದು ರಾಜಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net