ಕೃಷಿ ಚಟುವಟಿಕೆ, ಕೃಷಿ ಉತ್ಪನ್ನ ಸಾಗಣೆ- ಮಾರಾಟಕ್ಕೆ ನಿರ್ಬಂಧ ಹಾಕಬೇಡಿ: ಯಡಿಯೂರಪ್ಪಗೆ ದೇವೇಗೌಡ ಪತ್ರ

HDD 27 Feb 20
Published on

ಬೆಂಗಳೂರು: ಲಾಕ್ ಡೌನ್ ವೇಳೆಯಲ್ಲಿ ತರಕಾರಿ ಸಂಗ್ರಹ, ಸಾಗಾಟ, ಮಾರಾಟ ನಿರ್ಬಂಧಿಸಬಾರದು. ಕೃಷಿ ಉತ್ಪನ್ನಗಳನ್ನು ದೇಶದ ಯಾವುದೇ ಪ್ರದೇಶಕ್ಕೆ ಅಡೆತಡೆಗಳಿಲ್ಲದೆ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಿಗೆ ಪೂರ್ಣ ವಿನಾಯತಿ ನೀಡಬೇಕು. ಗ್ರಾಮ ಮಟ್ಟದಲ್ಲೇ ಹಾಲು ಸಂಗ್ರಹಿಸುವಂತೆ ತರಕಾರಿಯನ್ನು ಸರ್ಕಾರವೇ ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕು. ತೋಟಗಾರಿಕೆ ಉತ್ಪನ್ನ ಮತ್ತು ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ನಿರ್ಬಂಧ ಇರಬಾರದು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರಕೂಡದು ಎಂದು ಆಗ್ರಹಿಸಿದ್ದಾರೆ.

ಲಾಕ್ ಡೌನ್ ಆತುರದ ನಿರ್ಧಾರ:

ರೈತರ ಪಾಲಿಗೆ ಲಾಕ್ ಡೌನ್ ಆತುರದ ನಿರ್ಧಾರದಂತೆ ಕಾಣಿಸುತ್ತಿದೆ. ವೈರಾಣು ಕಾಣಿಸಿಕೊಂಡಿದ್ದರೂ ಎರಡು ತಿಂಗಳು ಸುಮ್ಮನಿದ್ದ ಸರ್ಕಾರ ನಂತರ ಯಾವುದೇ ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದೆ. ಇದರಿಂದಾಗಿ ರಾಜ್ಯ ಹಾಗೂ ದೇಶದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರು, ಕೃಷಿ ಕಾರ್ಮಿಕರು, ದಿನಗೂಲಿ ನೌಕರರ ಅನುಕೂಲಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್ ರೂಪಿಸಿ ಜಾರಿಗೊಳಿಸಬೇಕು. ಇಲ್ಲದೆ ಹೋದರೆ ಸರ್ಕಾರದ ನಿರ್ಲಕ್ಷ್ಯದಿಂದಾಗುವ ಅನಾಹುತಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net