ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಎಚ್.ಡಿ.ದೇವೇಗೌಡರ ತೇಜೋವಧೆ ಸಲ್ಲದು: ಒಕ್ಕಲಿಗರ ಸಂಘದಿಂದ ಖಂಡನೆ

HDD
Published on

ಮೈಸೂರು: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಅನಗತ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ಬಳಸಿ ತೇಜೋವಧೆ ಮಾಡುವುದನ್ನು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸಿದೆ.

ಹಾಸನದಲ್ಲಿ ಪ್ರಕರಣ ಖಂಡಿಸಿ ನಡೆದ ಮಹಿಳಾ ಸಂಘಟನೆಯಲ್ಲಿ ದೇವೇಗೌಡರ ಭಾವಚಿತ್ರವನ್ನು ಬಳಸಿ ಅವಹೇಳನೆ ಮಾಡುವುದು ಸರಿಯಲ್ಲ. ಅವರ ಹಿರಿತನಕ್ಕೆ ನಾವು ಗೌರವ ಕೊಡಬೇಕು. ಮಾಜಿ ಪ್ರಧಾನಿಗಳಾಗಿರುವ ಅವರ ಹೆಸರು, ಚಿತ್ರವನ್ನು ಬಳಕೆ ಮಾಡುವುದನ್ನು ಖಂಡಿಸುತ್ತೇನೆ.

ಮಾತ್ರವಲ್ಲದೆ ಯಾವುದೇ ಪಕ್ಷದ ರಾಜಕೀಯ ನಾಯಕರು ಈ ಪ್ರಕರಣದ ಬಗ್ಗೆ ಮಾತನಾಡುವಾಗ ದೇವೇಗೌಡರ ಹೆಸರು ಮುನ್ನೆಲೆಗೆ ತರುವುದು ಖಂಡನೀಯ. ಮುಂದೆ ಅಂತಹ ಹೇಳಿಕೆ ವ್ಯಕ್ತವಾದರೆ ಪ್ರತಿಭಟಿಸಿದವರ ವಿರುದ್ಧವೇ ಪ್ರತಿಭಟನೆ ನಡೆಸುವುದಾಗಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಸಂಘದ ನಿರ್ದೇಶಕ ಎ.ರವಿ ಮಾತನಾಡಿ, ಮುಂದಿನ ಹೋರಾಟದಲ್ಲಿ ಯಾರೂ ದೇವೇಗೌಡರ ಹೆಸರು ಹಾಗೂ ಭಾವಚಿತ್ರ ಬಳಸದಂತೆ ಮನವಿ ಮಾಡುತ್ತೇವೆ. ಇದಾಗಿಯೂ ಅವರ ಅವಹೇಳನ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಹೋರಾಟ ಮಾಡಲಾಗುವುದು. ಸಾಮಾಜಿಕ ಜಾಲತಾಣದಲ್ಲಿಯೂ ದೇವೇಗೌಡರ ಹೆಸರು ಹಾಗೂ ಚಿತ್ರವನ್ನು ಬಳಸಿ ಅವಹೇಳನಕಾರಿ ಪೋಸ್ಟರ್ ಬಿತ್ತರಿಸುವವರ ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು. ನಿರ್ದೇಶಕ ಗಿರೀಶ್‌ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net