ಎಚ್.ಡಿ.ದೇವೇಗೌಡರ ಹೋರಾಟ ಅವಿಸ್ಮರಣೀಯ

1 (2)
ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಮಾಣಿಕ್ಯನಹಳ್ಳಿ ಅಶೋಕ್, ಡಿ.ಶ್ರೀನಿವಾಸ್, ರಾಮಕೃಷ್ಣೇಗೌಡ, ಧನಂಜಯ ಇದ್ದರು.
Published on

ಪಾಂಡವಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಯ ಒಳರೋಗಿಗಳಿಗೆ ಶನಿವಾರ ಹಣ್ಣು, ಬ್ರೆಡ್ ಮತ್ತು ನೀರು ವಿತರಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ದೇವೇಗೌಡರು ಇಳಿ ವಯಸ್ಸಿನಲ್ಲೂ ಹೋರಾಟದ ಹಾದಿ ಬಿಟ್ಟಿಲ್ಲ. ಕನ್ನಡ ನಾಡು, ನುಡಿ, ಜಲ ಮತ್ತು ನೆಲದ ಸಮಸ್ಯೆ ಎದುರಾದಾಗಲೆಲ್ಲ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಕಾವೇರಿ, ಕೃಷ್ಣ, ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವಾಗಿ ಸಂಸತ್‌ನಲ್ಲಿ ಹೋರಾಟ ಮಾಡಿದ್ದಾರೆ. ಇನ್ನು ಬೆಳಗಾವಿ ಗಡಿ ವಿಚಾರದಲ್ಲೂ ಅವರ ಹೋರಾಟವಿದ್ದು, ಇಂತಹ ಮಹಾನ್ ಹೋರಾಟಗಾರ ಶತಾಯುಷಿಯಾಗಿ ದೀರ್ಘಕಾಲ ಬದುಕಬೇಕು ಎಂದರು.

ಪ್ರಧಾನಿಯಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದ ಕೀರ್ತಿ ಗೌಡರಿಗೆ ಸಲ್ಲುತ್ತದೆ. ಆರು ದಶಕದ ರಾಜಕಾರಣದ ಅನುಭವವಿರುವ ದೇವೇಗೌಡರ ಮಾರ್ಗದರ್ಶನ ದೇಶಕ್ಕೆ ಬೇಕಿದೆ. ನೀರಾವರಿ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅಪಾರವಿದ್ದು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ದೇವೇಗೌಡರ ಮಾನಸ ಪುತ್ರರಾಗಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಮಾಣಿಕ್ಯನಹಳ್ಳಿ ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ, ನಿರ್ದೇಶಕ ರಾಮಕೃಷ್ಣೇಗೌಡ, ಡಿ.ಶ್ರೀನಿವಾಸ್, ಸಂಗಾಯ್, ತಾಪಂ ಮಾಜಿ ಸದಸ್ಯ ವಿ.ಎಸ್.ನಿಂಗೇಗೌಡ, ಪುರಸಭಾ ಸದಸ್ಯರಾದ ಎಂ.ಗಿರೀಶ್, ಶಿವಕುಮಾರ್, ಜಯರಾಮು, ಬಿಜೆಪಿ ಕ್ಷೇತ್ರಾಧ್ಯಕ್ಷ ಧನಂಜಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net