

ಚಿಕ್ಕೋಡಿ: ಹ್ಯಾಜ್ ಟ್ಯಾಲೆಂಟ್ ತಾಲೂಕುಮಟ್ಟದ ಕಾರ್ಯಕ್ರಮ ಸೆ.24ರಿಂದ ಅ.3ರವರೆಗೆ ಜರುಗಿ ಮುಕ್ತಾಯಗೊಂಡಿದ್ದು, ಅ.7 ರಂದು ಗ್ರಾೃಂಡ್ ಫಿನಾಲೆ ಕಾರ್ಯಕ್ರಮ ಅ.7ರಂದು ಚಿಕ್ಕೋಡಿ ಪಟ್ಟಣದ
ಆರ್.ಡಿ.ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. 48 ಸ್ಪರ್ಧಿಗಳು ಪ್ರತಿಭಾ ಪ್ರದರ್ಶನ ಮಾಡಲಿದ್ದು, ಜೊಲ್ಲೆ ಗ್ರೂಪ್ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅವರ 61ನೆಯ ಜನ್ಮದಿನದ ಪ್ರಯುಕ್ತ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಚಿಕ್ಕೋಡಿ-ಸದಲಗಾ, ನಿಪ್ಪಾಣಿ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮಕ್ಕಳು ತಮ್ಮಲ್ಲಿರುವ ಕಲೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ್ದ ಹ್ಯಾಜ್ ಟ್ಯಾಲೆಂಟ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿತ್ತು. ತಾಲೂಕುಮಟ್ಟದಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಮಕ್ಕಳು ಕಾರ್ಯಕ್ರಮದಲ್ಲಿ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಗಡಿಭಾಗದಲ್ಲಿ ಜೊಲ್ಲೆ ಗ್ರೂಪ್ ಸಹಕಾರಿ, ಶಿಕ್ಷಣ, ಔದ್ಯೋಗಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತ ಬಂದಿದೆ. ಈಗ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆ ನೀಡುವತ್ತ ದಾಪುಗಾಲು ಇಡುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆ
ಗುರುತಿಸಲು ಜೊಲ್ಲೆ ಗ್ರೂಪ್ ಹ್ಯಾಜ್ ಟ್ಯಾಲೆಂಟ್ ಕಾರ್ಯಕ್ರಮದ ಮೂಲಕ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿರುವ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಕಲ್ಪಿಸಿದೆ.
ಕಾರ್ಯಕ್ರಮದಲ್ಲಿ ವಯಸ್ಸಿನ ಮಿತಿ ಇಲ್ಲದೆ ಗುಂಪು ನೃತ್ಯ, ಜಾನಪದ ಶೈಲಿಯ ಹಾಡು, ಜಾದೂ, ಯಕ್ಷಗಾನ, ಗ್ರಾಮೀಣ ವಾದ್ಯಗಳು- ಹೀಗೆ ಹಲವು ಕಾರ್ಯಕ್ರಮ ಪ್ರದರ್ಶನಗೊಂಡಿವೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಉತ್ತಮ ಪ್ರದರ್ಶನ ನೀಡಿದ ಆರು ಪ್ರತಿಭೆಗಳನ್ನು ಫಿನಾಲೆಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.