

ಮುದಗಲ್: ಪಟ್ಟಣದ ವೆಂಕಟರಾಯನಪೇಟೆಯಲ್ಲಿ ಹಜರತ್ ಇಮಾಮೆ ಕಾಸಿಂ ಪೀರಾ ಆಲಂಗಳ (ಕತಲ್ ರಾತ್ರಿ) ಸವಾರಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಗುರುವಾರ ಬೆಳಗ್ಗೆಯಿಂದಲೂ ದರ್ಗಾದತ್ತ ಮುಖ ಮಾಡಿದ ಸಹಸ್ರಾರು ಭಕ್ತರು ಮುಡುಪು ನೀಡಿ ಸಕ್ಕರೆ ನೈವೇದ್ಯ ಮಾಡಿ ಆಲಂಗಳಿಗೆ ಸಮರ್ಪಿಸಿದರು.
ಸಂಜೆ ಭಕ್ತರು ದೀರ್ಘದಂಡ ನಮಸ್ಕಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವುದು ಕಂಡುಬಂತು. ಕೆಲ ಭಕ್ತರು ಅಗ್ನಿಕುಂಡ ಹಾಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಗುರುವಾರ ತಡರಾತ್ರಿ ಆಲಂಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸವಾರಿ ಆರಂಭಿಸಲಾಯಿತು.
ಸವಾರಿ ಯುದ್ದಕ್ಕೂ ಭಕ್ತರು ಕೊಬ್ಬರಿಗಳನ್ನು ಸುಡುವುದು ಹಾಗೂ ಮುಗಿಲೆತ್ತರಕ್ಕೆ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು. ಕಾಸಿಂ ಪೀರಾ ಸವಾರಿ ಆರಂಭದ ನಂತರ ಕಿಲ್ಲಾದ ವಿವಿಧ ದರ್ಗಾ ಮತ್ತು ಬೇಗಂಪುರಪೇಟೆಯ ಮೌಲಾಲಿ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಆಲಂಗಳು ತಮ್ಮ ದರ್ಗಾಕ್ಕೆ ತೆರಳಿದವು. ಮುಂಜಾ ಗ್ರತಾ ಕ್ರಮವಾಗಿ ಪಿಎಸ್‌ಐ ವೆಂಕಟೇಶ ಮಾಡಗಿರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.