

ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 349 ರೂ. ಇದ್ದ ಕೂಲಿ ಹಣವನ್ನು, 2025-26ನೇ ಸಾಲಿಗೆ ಏಪ್ರಿಲ್ 1ರಿಂದ 370 ರೂ.ಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನರೇಗಾ ಕೂಲಿ 370 ರೂ.ಗೆ ಹೆಚ್ಚಿಸಿ ಕೇಂದ್ರ ಗ್ರಾಮೀಣಾಭಿವೃದ್ದಿ ಮಂತ್ರಾಲಯ ಅಧಿಸೂಚನೆ ಹೊರಡಿಸಿದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಸಿಗಲಿದೆ. ಕೂಲಿ ಹಣ ಹೆಚ್ಚಳದಿಂದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬಲ ಬಂದಂತಾಗಿದೆ.
ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಭಾಗವಹಿಸಲು ಮಹಿಳಾ ಸ್ನೇಹಿ ಕೆಲಸವನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಮಹಿಳೆಯರು ಶೇ.60ರಷ್ಟು ಭಾಗವಹಿಸುವಂತೆ ಈಗಾಗಲೇ ಸ್ತ್ರೀ-ಚೇತನ ಅಭಿಯಾನದ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 100 ಸ್ತ್ರೀಯರಿಗೆ ಕೆಲಸ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ನೋಂದಾಯಿತ ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯ ಸದುಪಯೋಗ ಪಡೆಯಬೇಕೆಂದು ಸಿಇಒ ರುಚಿ ಬಿಂದಾಲ್ ತಿಳಿಸಿದ್ದಾರೆ.
100 ದಿನ ಕೂಲಿ:
ಜಿಲ್ಲೆಯ ಪ್ರತಿ ಅರ್ಹ ಕುಟುಂಬಕ್ಕೂ 100 ದಿನಗಳ ಅಕುಶಲ ಕೂಲಿ ಕೆಲಸ ಒದಗಿಸುವುದರೊಂದಿಗೆ ಕೂಲಿ ಹಣ 370 ರೂ. ನೀಡಲಾಗುವುದು. ಏ.1ರಿಂದ ಕೂಲಿ ಕೆಲಸ ಒದಗಿಸಲು ಎನ್.ಎಂ.ಆರ್. ಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಿಂದ ಕೆಲಸಕ್ಕಾಗಿ ಯಾರೂ ವಲಸೆ ಹೋಗದಂತೆ ಅವರ ಕುಟುಂಬಕ್ಕೆ ಕೆಲಸ ನೀಡುವುದು ಇದರ ಮುಖ್ಯಉದ್ದೇಶವಾಗಿದೆ.