

ಹಾವೇರಿ: ಜಿಲ್ಲೆಯಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳು ಹಾಗೂ ಕೆರೆ ತುಂಬಿಸುವ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ಎಂದು ಸಂಬಂಧಿಸಿದ ಅಭಿಯಂತರರುಗಳಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಳಂಬೀಡ, ಸರ್ವಜ್ಞ ಕೆರೆ ತುಂಬಿಸುವ ಯೋಜನೆ ಒಳಗೊಂಡಂತೆ 350 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳು ಮಂಜೂರಾಗಿವೆ. ತಡಸ, ಆಡೂರ ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂದರು.
ಮುಖ್ಯಮಂತ್ರಿಯವರು ಮಂಗಳವಾರ ಜಿಲ್ಲೆಯ ಪ್ರಗತಿಪರಿಶೀಲನೆ ನಡೆಸಲಿದ್ದಾರೆ. ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳು, ನೀರಾವರಿ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ನಿಮ್ಮ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಿರುವ ತೊಡಕುಗಳ ಕುರಿತಂತೆ ವಿವರಿಸಬೇಕು ಎಂದರು.
ಬಾರ್ ಚಾಟ್ ಪ್ರಕಾರ ಕಾಲಮಿತಿಗೆ ಅನುಸಾರವಾಗಿ ಕೆಲಸ ಮಾಡಬೇಕು. ಸಣ್ಣ ನೀರಾವರಿ, ಬೃಹತ್ ನೀರಾವರಿ ಯೋಜನೆಗಳು ಹಾಗೂ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿ ವಿವರ, ಅನುದಾನ ಆರಂಭಿಸಿದ ದಿನ, ಮುಕ್ತಾಯಗೊಳ್ಳಬೇಕಾದ ದಿನ, ವಿಳಂಬಕ್ಕೆ ಕಾರಣ ಸಹಿತ ಪೂರ್ಣ ಮಾಹಿತಿಯನ್ನು ಸಭೆಗೆ ಮಂಡಿಸುವಂತೆ ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಶೇ.87ರಷ್ಟು ಬಿತ್ತನೆಯಾಗಿದೆ. ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಮಳೆ ಕೊರತೆ ಉಂಟಾಗಬಹುದು ಎಂಬ ಮಾಹಿತಿ ಇದೆ. ಈಗ ಬಿತ್ತನೆ ಮಾಡಿದ ಬೆಳೆ ರಕ್ಷಣೆಗೆ ಪರ್ಯಾಯ ಕ್ರಮಗಳ ಸಿದ್ಧತೆ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಿ. ಒಂದೊಮ್ಮೆ ಮಳೆ ಕೈಕೊಟ್ಟರೆ ಕೊಳವೆಬಾವಿ, ಪಂಪಸೆಟ್ ಮೂಲಕ ಬೆಳೆ ರಕ್ಷಣೆ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಲು ಸೂಚಿಸಿದರು.
ಜಿಲ್ಲೆಯಲ್ಲಿ 95,700 ರೈತರು ಈಗಾಗಲೇ ಜಿಲ್ಲೆಯಲ್ಲಿ ಬೆಳೆವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಒಂದು ಲಕ್ಷ ರೈತರು ನೋಂದಣಿ ಮಾಡಿಸಿಕೊಳ್ಳುವ ಅಂದಾಜಿದೆ. ನೋಂದಣಿ ಪ್ರಕ್ರಿಯೆ ಮುಂದುವರೆದಿದ್ದು, ಅರ್ಹ ರೈತರ ಬೆಳೆ ವಿಮೆ ನೋಂದಣಿಗೆ ವ್ಯಾಪಕ ಜಾಗೃತಿ ಮೂಡಿಸಿ ಎಂದರು.
ಇದೇ ಸಂದರ್ಭದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಶಕ್ತಿ ಯೋಜನೆಯಡಿ ವಿದ್ಯಾರ್ಥಿಗಳು ಹಾಗೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಡೆ ಹೆಚ್ಚುವರಿ ಬಸ್‌ಗಳನ್ನು ಆರಂಭಿಸಿ. ಹೆಚ್ಚುವರಿ ಬಸ್‌ಗಳು ಬೇಕಾದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳುತ್ತಿರುವ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೆಂಟರ್‌ಗಳಲ್ಲಿ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಬಂದಿವೆ. ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ರೀತಿ ದೂರು ಬರದಂತೆ ನಿಯಮಿತವಾಗಿ ತಹಶೀಲ್ದಾರರು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ಡಿಎಫ್‌ಒ ಬಾಲಕೃಷ್ಣ, ಇತರರು ಉಪಸ್ಥಿತರಿದ್ದರು.