

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ
ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ತಾಲೂಕಿನಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ತಕ್ಷಣವೇ ಬರ ಪರಿಹಾರ ಹಾಗೂ ಸಾಲಮನ್ನಾ ಮಾಡಬೇಕು. ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನಲ್ಲಿ ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬೆಳೆ ಕೈಸೇರದೆ ನಷ್ಟವಾಗಿದೆ. ತಕ್ಷಣ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2024ರಿಂದ ಬಾಕಿ ಇರುವ ವಿಮೆ ಮೊತ್ತ ಬಿಡುಗಡೆ ಮಾಡಬೇಕು. ಈ ವರ್ಷ ತೀವ್ರ ಬರ ಇರುವ ಕಾರಣ ಯಾವುದೇ ಮಾನದಂಡ ನೋಡದೆ ವಿಮೆ ತುಂಬಿದ ಎಲ್ಲ ರೈತರಿಗೆ ಹಣ ಕೊಡಬೇಕು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮ ಸಡಿಲಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕವಾಗಿ ಡಿಬಿಟಿ ಮೂಲಕ ಪರಿಹಾರ ನೀಡಬೇಕು. ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲ ವಸೂಲಿ ನೆಪದಲ್ಲಿ ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿದಾರರು ನಡೆಸುತ್ತಿರುವ ಬಲವಂತದ ಜಪ್ತಿ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾತ್ರಿ ವೇಳೆ ಹಾವು, ವನ್ಯಜೀವಿ ದಾಳಿಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ 7 ಗಂಟೆ ಗುಣಮಟ್ಟದ ವಿದ್ಯುತ್ ಹಗಲಿನಲ್ಲೇ ನೀಡಬೇಕು. ಮುಂದಿನ ಹಿಂಗಾರು ಬಿತ್ತನೆಗೆ ಉಚಿತವಾಗಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ನೀಡಬೇಕು. ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಹೊಸ ಬೋರ್‌ವೆಲ್ ಮತ್ತು ಸೋಲಾರ್ ಪಂಪ್‌ಸೆಟ್‌ಗೆ ಶೇ.100ರಷ್ಟು ರಿಯಾಯಿತಿ ನೀಡಬೇಕು ಎಂದರು. ಗ್ರೇಡ್ 2 ತಹಸೀಲ್ದಾರ್ ಎಸ್.ಆರ್.ಸಿದ್ದನಗೌಡ್ರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ಶಾಂತನಗೌಡ ಪಾಟೀಲ, ಗಂಗನಗೌಡ ಮುದಿಗೌಡ್ರ, ಈರಪ್ಪ ಮಾಳೂರು, ಮಹ್ಮದ್‌ಗೌಸ್ ಪಾಟೀಲ, ಮುದಿಗೌಡ, ಯಶವಂತ ತಿಮಕಾಪುರ, ಮೌನೇಶ ನರಸಾಪುರ, ರುದ್ರಪ್ಪ ಆಣೂರ ಇತರರಿದ್ದರು.