

ಅರಕಲಗೂಡು: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹಿತರಕ್ಷಣೆಗೆ ಸಂಬಂಧಿಸಿದ ಸಭೆಗೆ ಹಲವು ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಿಗದಿಯಾಗಿದ್ದ ಎಸ್‌ಸಿಎಸ್‌ಟಿ ಜಾಗೃತಿ ಮತ್ತು ಹಿತರಕ್ಷಣಾ ಸಭೆಯಲ್ಲಿ ತಾಲೂಕು ಮಟ್ಟದ ಬೆರಳೆಣಿಕೆಯಷ್ಟು ಅಧಿಕಾರಿಗಳು ಭಾಗವಹಿಸಿದ್ದರು. ಮೂರು ತಿಂಗಳಿಗೊಮ್ಮೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಚರ್ಚೆ ನಡೆಸಬೇಕು. ಆದರೆ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಸಭೆಯ ಉದ್ದೇಶವೇ ವಿಫಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ದಸಂಸ ಮುಖಂಡರು, ಎಲ್ಲ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗುವವರೆಗೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ನಂತರ ದಲಿತ ಮುಖಂಡರು ಸಭೆಯಿಂದ ಹೊರನಡೆದು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಗೈರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಸ್‌ಸಿಎಸ್‌ಟಿ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇಂತಹ ಸಭೆಗಳಿಗೆ ಲ್ಲ ಇಲಾಖೆ ಅಧಿಕಾರಿಗಳ ಕಡ್ಡಾಯ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರ ಮನವೊಲಿಸಿ ಮತ್ತೆ ಸಭೆಗೆ ಕರೆತರಲು ತಹಸೀಲ್ದಾರ್ ಸೌಮ್ಯಾ ಹಾಗೂ ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಸಭೆಗೆ ಹಾಜರಾಗುವಂತೆ ಮನವಿ ಮಾಡಿದರೂ ಮುಖಂಡರು ನಿಲುವಿನಿಂದ ಹಿಂದೆ ಸರಿಯದೆ ಪ್ರತಿಭಟನೆ ಮುಂದುವರಿಸಿದರು.