ಗ್ರಾಹಕ ಜೇಬಿಗೆ ಹೊರೆಯಾದ ಕೆಂಪು ಸುಂದರಿ! tomato price hike

ಆವಕ ಕುಸಿತ ಹಿನ್ನೆಲೆ ಟೊಮೇಟೋ ದರ ಏರಿಕೆ, ಬಿತ್ತನೆ ಕ್ಷೇತ್ರವೂ ಗಣನೀಯವಾಗಿ ಇಳಿಕೆ
tomato price hike
ರಾಣೆಬೆನ್ನೂರು ನೆಹರು ಮಾರುಕಟ್ಟೆಯ ಎಪಿಎಂಸಿ ಉಪ ಪ್ರಾಗಂಣದಲ್ಲಿ ಹರಾಜಿನಲ್ಲಿ ಟೊಮೆಟೋ ಬಾಕ್ಸ್ ಇಟ್ಟಿರುವುದು.
Published on: 

ಮಂಜುನಾಥ ಹೊಸಪೇಟೆ ರಾಣೆಬೆನ್ನೂರು

ಮಳೆ ಕೊರತೆಯಿಂದ ಇಳುವರಿ ಕುಂಠಿತಗೊಂಡು ಎಲ್ಲ ಬೆಳೆಗಳು ಏರುಮುಖವಾಗಿವೆ. ಕೆಲವು ತಿಂಗಳು ಹಿಂದಷ್ಟೇ ಈರುಳ್ಳಿ ಬೆಲೆ ಜಾಸ್ತಿಯಾಗಿ ಜನರ ಕಣ್ಣಲ್ಲಿ ಇನ್ನೂ ನೀರು ತರಿಸುತ್ತಿದೆ. ಇದರ ಬೆನ್ನಲೆ ಕೆಂಪು ಸುಂದರಿ ಟೊಮೆಟೋ ದರ ಸಹ ಏರಿಕೆಯತ್ತ ಸಾಗಿದ್ದು, ಇದು ಜನರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

ತಾಲೂಕಿನಲ್ಲಿ ಪ್ರಸಕ್ತ ವರ್ಷ ಟೊಮೆಟೋ ಬೆಳೆಯುವ ಕ್ಷೇತ್ರ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ಆವಕ ಕಡಿಮೆಯಾದ ಪರಿಣಾಮ ದರ ಏರಿಕೆಯಾಗಿದೆ. ಕಳೆದ ವರ್ಷ ಅಂದಾಜು 500 ಹೆಕ್ಟೇರ್‌ನಲ್ಲಿ ಟೊಮೆಟೋ ಬೆಳೆಯಲಾಗಿತ್ತು. ಪ್ರಸಕ್ತ ವರ್ಷ ಈ ಪ್ರಮಾಣ 350 ಹೆಕ್ಟೇರ್‌ಗೆ ಕುಸಿತಗೊಂಡಿದೆ. ಮಳೆ ಕೊರತೆ ಹಾಗೂ ನೀರಿನ ಲಭ್ಯತೆ ಕಡಿಮೆಯಾಗಿರುವುದು ಬೆಳೆ ಕ್ಷೇತ್ರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಟೊಮೆಟೋ ಬಿತ್ತನೆ ಆರಂಭವಾಗುತ್ತದೆ. ಆದರೆ, ಪ್ರಸಕ್ತ ವರ್ಷ ಮುಂಗಾರು ಮಳೆ ವಿಳಂಬವಾಗಿದ್ದಲ್ಲದೆ, ಜುಲೈ ಮತ್ತು ಆಗಸ್ಟ್‌ನಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಮುಂಗಾರು ಪೂರ್ವದ ದೀರ್ಘಕಾಲದ ಬಿಸಿಲಿನಿಂದ ಅಂತರ್ಜಲ ಮಟ್ಟದಲ್ಲಿಯೂ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ. ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಇನ್ನೂ ದರ ಹೆಚ್ಚಾಗುವ ಸಾಧ್ಯತೆ: ಬೆಳೆ ಕ್ಷೇತ್ರ ಕಡಿಮೆಯಾಗಿರುವುದರಿಂದ ಉತ್ಪಾದನೆ ಹಾಗೂ ಮಾರುಕಟ್ಟೆ ಆವಕದಲ್ಲಿಯೂ ಇಳಿಕೆಯಾಗಿದೆ. ಬೇಡಿಕೆಗೆ ಹೋಲಿಸಿದರೆ ಪೂರೈಕೆ ಕಡಿಮೆಯಾಗಿರುವುದರಿಂದ ದರ ಏರಿಕೆಯಾಗಿದೆ. ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಟೊಮೆಟೋಗೆ ಕಳೆದ ತಿಂಗಳ ಕೊನೆಯಲ್ಲಿ ಕೆಜಿಗೆ 3 ರೂ. ರಿಂದ 10 ರೂ. ದಾಖಲಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 10 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇದೇ ಟೊಮೆಟೋ ಪ್ರಸ್ತುತ 30 ರೂ.ಗೆ ಮಾರಾಟವಾಗುತ್ತಿದೆ. ಈಗಾಗಲೇ ಹೋಲ್‌ಸೆಲ್ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 200 ರೂ. ಇದ್ದ ಬಾಕ್ಸ್ ಸೆಪ್ಟೆಂಬರ್ ಕೊನೆಯಲ್ಲಿ 700 ವರೆಗೂ ದಾಟಿ ಹೋಗಿತ್ತು. ದಸರಾ ಹಾಗೂ ದೀಪಾವಳಿ ಹಬ್ಬಗಳು ಬರುವ ಕಾರಣ ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಏರಿಕೆಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ದರ ಏರಿಕೆಯಿಂದ ಜನರಿಗೆ, ಹೋಟೆಲ್ ಉದ್ಯಮದಾರರಿಗೆ ಹಾಗೂ ಅಡುಗೆ ಕ್ರಾಂಟ್ಯಾಕ್ಟ್ ಮಾಡುವರಿಗೆ ಹೊಸ ತಲೆನೋವಾಗಿ ಪರಿಣಿಮಿಸಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಈರುಳ್ಳಿ ದರ ಏರಿಕೆಯಾಗಿದೆ, ಈಗ ಟೊಮೊಟೋ ದರ ಹೆಚ್ಚಾಗಿದ್ದರಿಂದ ಅಡುಗೆ ಮನೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಹೋಟೆಲ್ ದರದಲ್ಲೂ ಬದಲಾವಣೆ ಬರುವ ಸೂಚನೆಯೂ ಇದೆ.

ಮುಂಗಾರಿನಲ್ಲಿ ಮಳೆ ಕೊರತೆ ಹಾಗೂ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಬಾರಿ ರೈತರು ಕಡಿಮೆ ಪ್ರಮಾಣದಲ್ಲಿ ಟೊಮೆಟೋ ಬಿತ್ತನೆ ಮಾಡಿದ್ದಾರೆ. ಇದರಿಂದ ಮಾರುಕಟ್ಟೆಗೆ ಆವಕ ಕಡಿಮೆಯಾಗಿದ್ದು, ಬೇಡಿಕೆ-ಪೂರೈಕೆ ವ್ಯತ್ಯಾಸದಿಂದ ದರ ಏರಿಕೆಯಾಗುತ್ತಿದೆ.ಮಂಜು ನಾಯ್ಕ, ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಣೆಬೆನ್ನೂರು.
ಕಳೆದ ಮುಂಗಾರಿನಲ್ಲಿ ಟೊಮೆಟೋಗೆ ಉತ್ತಮ ದರ ಸಿಗದ ಕಾರಣ ರೈತರು ಬೆಳೆ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ಬಳಿಕ ಹುಳುಬಾಧೆಯಿಂದ ಇಳುವರಿಯೂ ಕಡಿಮೆಯಾಗಿತ್ತು. ಈ ಬಾರಿ ಟೊಮೆಟೋ ಬೆಳೆ ಕ್ಷೇತ್ರ ಕಡಿಮೆಯಾಗಿರುವುದರಿಂದ ಮಾರುಕಟ್ಟೆಗೆ ಆವಕ ಕುಸಿದಿದ್ದು, ದರ ಏರಿಕೆಯಾಗಿದೆ. ಸಿದ್ದಪ್ಪ ತಳವಾರ,
ಟೊಮೆಟೋ ಬೆಳೆಗಾರ, ಕೂಲಿ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net