

ರಾಣೆಬೆನ್ನೂರು: ಮಳೆ ಕೊರತೆಯಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ (ಯುಟಿಪಿ) ಕಾಲುವೆಗಳಿಗೆ ಭದ್ರಾ ಜಲಾಶಯದಿಂದ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಯುಟಿಪಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇ) ಬಸವರಾಜ ಬಿ. ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿದ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಸಾವಿರಾರು ರೈತರು ಕೃಷಿಗಾಗಿ ಸಾಲ ಮಾಡಿ ಬಿತ್ತನೆ ನಡೆಸಿದ್ದು, ಈಗ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಭದ್ರಾ ಜಲಾಶಯದಿಂದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ತಕ್ಷಣ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ನೀರು ಹರಿಸುವಲ್ಲಿ ಯಾವುದೇ ವಿಳಂಬ ಮಾಡದೆ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತ ಸಂಘದಿಂದ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ಎಇ ಬಸವರಾಜ ಬಿ. ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರಾದ ಯಲ್ಲಪ್ಪ ಚಿಕ್ಕಣ್ಣವರ, ಮಹದೇವಪ್ಪ ಬಣಕಾರ, ನಾಗರಾಜ ಮಲ್ಲಾಪುರ, ವೆಂಕಟೇಶ ಕರೂರ, ಲಲಿತವ್ವ ಲಮಾಣಿ, ರಾಜೇಶ ಮಾಗೋಡ, ಕಲ್ಲೇಶ ಗುಡಿಹಿದ್ಲವರ ಹಾಗೂ ರೈತ ಸಂಘದ ಪದಾಧಿಕಾರಿಗಳು, ಮುಖಂಡರು ಇದ್ದರು.