Urination ಶಿಗ್ಗಾಂವ ಆಂಜನೇಯ ದೇಗುಲದಲ್ಲಿ ಮೂತ್ರ ವಿಸರ್ಜನೆ

ಶಿಗ್ಗಾಂವ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ಶಿಗ್ಗಾಂವ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅನ್ಯಕೋಮಿನವನ ವರ್ತನೆಗೆ ಆಕ್ರೋಶ
  • ಹಿಂದೂ ಕಾರ್ಯಕರ್ತರ ಪ್ರತಿಭಟನೆ
  • ಆರೋಪಿ ವಶಕ್ಕೆ

ಶಿಗ್ಗಾಂವ:

ಪಟ್ಟಣದ ಟೆಂಪೋ ನಿಲ್ದಾಣದ ಬಳಿಯಿರುವ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಶುಕ್ರವಾರ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ರಾತ್ರಿ ಸುಮಾರು 10 ಗಂಟೆಯ ನಂತರ ಮಹಮ್ಮದ್‌ಜಾಫರ್ ಅಬ್ದುಲ್‌ರೆಹಮಾನ್ ಕದರಮಂಡಲಗಿ ಎಂಬಾತ ಆಂಜನೇಯನ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ, ನಂತರದಲ್ಲಿ ಅಲ್ಲಿಯೇ ನಿಂತು ‘ಇವತ್ತು ನಮ್ಮ ಶಾಸಕ ಯಾಸೀರಖಾನ್ ಪಠಾಣ ಅವರ ಜನ್ಮದಿನ, ಜನ್ಮದಿನದ ಸಂಭ್ರಮದ ನಮ್ಮ ಕೊಡುಗೆ, ತಾಲೂಕಿನಲ್ಲಿ ನಮ್ಮನ್ನು ಯಾರೂ ಕೇಳುವವರಿಲ್ಲ. ನಮ್ಮದೇ ದರ್ಬಾರ್, ನಾವು ಹೇಳಿದಂತೆ ಕೇಳಬೇಕು’ ಎಂಬುದಾಗಿ ಕೂಗಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ತಕ್ಷಣವೇ ಟೆಂಪೋ ನಿಲ್ದಾಣದಲ್ಲಿರುವ ಸಾರ್ವಜನಿಕರು ವ್ಯಕ್ತಿಯ ಕೂಗಾಟ ಕೇಳಿ, ದೌಡಾಯಿಸಿ ಮೂತ್ರ ವಿಸರ್ಜನೆ ಮಾಡಿರುವುದನ್ನು ಗಮನಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಗುರುವಾರ ತಡ ರಾತ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಶುಕ್ರವಾರ ಬೆಳಗ್ಗೆಯಿಂದ ಆಂಜನೇಯ ದೇವಸ್ಥಾನ ಬಳಿ ಜಮಾಯಿಸಿದ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮಹಮ್ಮದ್‌ಜಾಫರ್ ಕದರಮಂಡಲಗಿಯನ್ನು ಗಡಿಪಾರು ಮಾಡಬೇಕು, ಘಟನೆಗೆ ಕಾರಣವಾದ ವ್ಯಕ್ತಿಯ ಮನೆಯವರಿಂದ ದೇವಸ್ಥಾನ ಶುದ್ಧೀಕರಿಸಬೇಕು ಎಂದು ದೇವಸ್ಥಾನದ ಬಳಿ ವಾಹನ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೃತ್ಯ ಎಸಗಿದ ಮಹಮ್ಮದ್‌ಜಾಫರ್ ಕದರಮಂಡಲಗಿ ವಿರುದ್ಧ ದೂರು ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಪ್ರತಿಭಟನೆ ಕೈಬಿಡಲು ಕೋರಿದರು. ಇದನ್ನು ಒಪ್ಪದ ಪ್ರತಿಭಟನಾಕಾರರು ಕೇವಲ ಕೇಸ್ ದಾಖಲಿಸಿಕೊಂಡರೆ, ಜಾಮೀನು ಪಡೆದು ಹೊರಗೆ ಬರುತ್ತಾನೆ. ಹೊರ ಬಂದ ನಂತರವೂ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಆತ ಮುಂದುವರಿಸುತ್ತಾನೆ. ಆತನನ್ನು ಗಡಿಪಾರು ಮಾಡಲು ಕಾನೂನು ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಆಗ ಕಾನೂನು ಪ್ರಕಾರ ಕ್ರಮವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಆಂಜನೇಯ ದೇವಸ್ಥಾನ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಮಹಮ್ಮದ್‌ಜಾಫರ್ ಕದರಮಂಡಲಗಿ ಎಂಬಾತನನ್ನು ಗುರುವಾರ ರಾತ್ರಿಯೇ ವಶಕ್ಕೆ ಪಡೆದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

— ಗುರುಶಾಂತಪ್ಪ ವಿ.ಕೆ. ಡಿವೈಎಸ್ಪಿ, ಶಿಗ್ಗಾಂವ

ಮಂಪರು ಪರೀಕ್ಷೆಗೊಳಪಡಿಸಲು ಒತ್ತಾಯ

ಜಿಹಾದಿ ಮನಸ್ಥಿತಿಯ ವ್ಯಕ್ತಿಗಳು ಇಂತಹ ಕತ್ಯ ನಡೆಸಲು ಸಾಧ್ಯ, ಮಹಮ್ಮದ್ ಜಾರ್ ಎನ್ನುವ ಒಬ್ಬ ವ್ಯಕ್ತಿಯಿಂದ ಈ ಕತ್ಯ ನಡೆಯಲು ಸಾಧ್ಯವಿಲ್ಲ. ಮೂತ್ರ ವಿಸರ್ಜನೆಯ ನಂತರ ಆತನ ವರ್ತನೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಈ ವ್ಯಕ್ತಿಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ವ್ಯಕ್ತಿಯ ಮಂಪರು ಪರೀಕ್ಷೆ ಮಾಡಿದರೆ ಮಾತ್ರ ಸತ್ಯ ಸಂಗತಿ ಹೊರಲು ಸಾಧ್ಯವಿದೆ ಎಂದರು.
ಬೇರೆ ತಾಲೂಕಿನಿಂದ ಬಂದ ವ್ಯಕ್ತಿ ಪಟ್ಟಣದಲ್ಲಿ ಅನಧಿಕತವಾಗಿ ಮನೆ ಕಟ್ಟಿಕೊಂಡಿದ್ದು, ಆತನಿಗೆ ಹಕ್ಕು ಪತ್ರ ಕೊಡಲಾಗಿದೆ. ಸನಾತನ ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ವ್ಯಕ್ತಿಯ ಮನೆಯನ್ನು ನೆಲಸಮ ಮಾಡಬೇಕು. ಆತನಿಗೆ ಕೊಟ್ಟ ಹಕ್ಕು ಪತ್ರ ವಾಪಸು ಪಡೆಯಬೇಕು. ಶಾಸಕ ಯಾಸೀರಖಾನ್ ಪಠಾಣ ಅವರು ತಮ್ಮ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಬೇರೆ ಬೇರೆ ತಾಲೂಕಿನಿಂದ ಬಂದ ವ್ಯಕ್ತಿಗಳಿಗೆ ಸ್ಥಳೀಯ ಹಕ್ಕು ಪತ್ರಗಳನ್ನು ಕೊಡುತ್ತಿರುವುದು ಖಂಡನೀಯ ಎಂದರು.

26ರಂದು ಶಿಗ್ಗಾಂವ

ಬಂದ್‌ಗೆ ಕರೆ

ಆಂಜನೇಯ ದೇವಸ್ಥಾನದಲ್ಲಿ ಅನ್ಯ ಕೋಮಿನ ವ್ಯಕ್ತಿಯಿಂದ ಮೂತ್ರ ವಿಸರ್ಜನೆ ಘಟನೆ ಖಂಡಿಸಿ ಸ್ಥಳೀಯರು, ಹಿಂದೂ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಆ.26ರಂದು ಶಿಗ್ಗಾಂವ ಪಟ್ಟಣ ಬಂದ್‌ಗೆ ಕರೆ ಕೊಡಲಾಗಿದೆ. ಸ್ಥಳೀಯ ಮುಖಂಡರು ತೆಗೆದುಕೊಂಡ ನಿರ್ಧಾರದಂತೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ಕೊಡಲಿದೆ. ಸ್ಥಳೀಯ ಎಲ್ಲ ಹಿಂದೂ ಸಂಘಟಕರು, ಅಂದು ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿ ಶಾಂತಿಯುತ ಹೋರಾಟ ನಡೆಸಬೇಕೆಂದು ಸಾರ್ವಜನಿಕರಲ್ಲಿ ಪ್ರಮೋದ ಮುತಾಲಿಕ್ ಮನವಿ ಮಾಡಿದರು.

ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ

ಶಿಗ್ಗಾಂವ: ಪಟ್ಟಣದ ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅನ್ಯ ಕೋಮಿನ ವ್ಯಕ್ತಿ ನಡೆದುಕೊಂಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 17 ವರ್ಷಗಳ ಕಾಲ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಇಂತಹ ಅಹಿತಕರ ಘಟನೆಗಳು ನಡೆದ ಉದಾಹರಣೆಗಳಿಲ್ಲ. ಎಲ್ಲ ಸಮುದಾಯದವರು ಸೌಹಾರ್ದದಿಂದ ಬದುಕುವ ವಾತಾವರಣವಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಇಂತಹ ಘಟನೆಗಳು ತಾಲೂಕಿಗೆ ಕಳಂಕ ತಂದಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದು ಮತ್ತೊಂದು ಸಮುದಾಯವನ್ನು ಗೌರವಿಸುವುದು ಸೌಹಾರ್ದವಲ್ಲ. ‘ನಾವು ಏನೇ ಮಾಡಿದರೂ ಕೊನೆಗೆ ನಮ್ಮ ಪರ ಕಾಂಗ್ರೆಸ್ ಸರ್ಕಾರದ ರಾಜಕೀಯ ನಾಯಕರು ನಿಲ್ಲುತ್ತಾರೆ’ ಎಂಬ ಧೈರ್ಯವೇ ಇಂತಹ ಕೃತ್ಯಗಳಿಗೆ ಕಾರಣವೇ? ಎಂದು ಅವರು ಪ್ರಶ್ನಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net