ಮಲೆನಾಡಿನ ಮಳೆಗೆ ತುಂಗಭದ್ರಾ ಮೈದುಂಬಿ ಹರಿವು

ಐಕ್ಯ ಮಂಟಪ ಮುಳಗಿರುವುದು
ಐಕ್ಯ ಮಂಟಪ ಮುಳಗಿರುವುದು
Published on

ರಾಣೆಬೆನ್ನೂರು: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ತುಂಗಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ತಾಲೂಕಿನ ನದಿ ಪಾತ್ರದಲ್ಲಿ ತುಂಗಭದ್ರಾ ಮೈದುಂಬಿ ಹರಿಯುತ್ತಿದ್ದಾಳೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ತಾಲೂಕಿನ ಹಲವು ಗ್ರಾಮಗಳ ರೈತರು ತುಂಗಭದ್ರಾ ನದಿ ನೀರನ್ನೇ ಕೃಷಿಗೆ ಪ್ರಮುಖ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಆತಂಕದಲ್ಲಿದ್ದ ರೈತರಿಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದು ನೆಮ್ಮದಿ ತಂದಿದೆ. ವಿಶೇಷವಾಗಿ ಭತ್ತದ ಗದ್ದೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ದೊರೆಯುವ ನಿರೀಕ್ಷೆ ಮೂಡಿದ್ದು, ಬೆಳೆಗಳು ಚೇತರಿಸಿಕೊಳ್ಳುವಂತಾಗಿದೆ.

ಭತ್ತದ ಗದ್ದೆಗಳಲ್ಲಿ ಹೊಸ ಉತ್ಸಾಹ...

ತಾಲೂಕಿನ ನದಿ ಪಾತ್ರ ಹಾಗೂ ನೀರಾವರಿ ಪ್ರದೇಶಗಳಲ್ಲಿ ಭತ್ತ, ಕಬ್ಬು, ಎಲೆಬಳ್ಳಿ ತೋಟ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಳೆ ಕೊರತೆಯಿಂದಾಗಿ ಕೆಲವೆಡೆ ಬೆಳೆಗಳ ಬೆಳವಣಿಗೆ ಕುಂಠಿತವಾಗಿತ್ತು. ಇದೀಗ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ನೀರಾವರಿ ವ್ಯವಸ್ಥೆಗೆ ಅನುಕೂಲವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಭತ್ತದ ಬೆಳೆಗೆ ನಿರಂತರವಾಗಿ ನೀರು ಅಗತ್ಯವಿರುವುದರಿಂದ ನದಿಯಲ್ಲಿ ನೀರಿನ ಲಭ್ಯತೆ ಹೆಚ್ಚಿರುವುದು ರೈತರಿಗೆ ವರದಾನವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಮುಂದುವರಿದು ನದಿಗೆ ಸಮರ್ಪಕವಾಗಿ ನೀರು ಹರಿದುಬಂದರೆ, ನೀರಾವರಿ ಪ್ರದೇಶದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ಜಲಾವೃತಗೊಂಡ ಐಕ್ಯ ಮಂಟಪ...

ತಾಲೂಕಿನ ಚೌಡಯ್ಯನದಾಪುರ ಬಳಿಯ ತುಂಗಭದ್ರಾ ನದಿ ತೀರದಲ್ಲಿರುವ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವು ನದಿಯ ನೀರಿನಲ್ಲಿ ಮುಳುಗಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಪರಿಣಾಮ ಐಕ್ಯ ಮಂಟಪ ಸಂರ್ಪೂಣವಾಗಿ ಜಲಾವೃತಗೊಂಡಿದ್ದು, ಸ್ಥಳಿಯರ ಗಮನ ಸೆಳೆಯುತ್ತಿದೆ.

ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸಬೇಕಿದೆ. ನೀರಿನ ಹರಿವು ಹೆಚ್ಚಿರುವ ಸಂದರ್ಭದಲ್ಲಿ ನದಿಗೆ ಇಳಿಯುವುದು, ಈಜಲು ಮುಂದಾಗುವುದು ಅಥವಾ ಅಪಾಯಕಾರಿ ಸ್ಥಳಗಳಲ್ಲಿ ತೆರಳುವುದನ್ನು ತಪ್ಪಿಸುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net