traffic Trouble: ನೆಮ್ಮದಿಗೆ ಭಂಗ ತಂದ ಸಂಚಾರ ಕಿರಿಕಿರಿ!

ಬಂಕಾಪುರ ಶಹ ಬಜಾರ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದ್ದರಿಂದ ವಾಹಸ ಸಂಚಾರ ಅಸ್ತವ್ಯಸ್ತವಾಗಿರುವುದು.
ಬಂಕಾಪುರ ಶಹ ಬಜಾರ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದ್ದರಿಂದ ವಾಹಸ ಸಂಚಾರ ಅಸ್ತವ್ಯಸ್ತವಾಗಿರುವುದು.
Published on
ಬಂಕಾಪುರ: ರಸ್ತೆ ನಿಯಮ ಉಲ್ಲಂಘನೆ, ವಾಹನ ನಿಂತಲ್ಲೇ ಪಾರ್ಕಿಂಗ್, ಜನ ಹತ್ತಿದಲ್ಲೇ ಬಸ್ ನಿಲ್ದಾಣ, ಬಂಡಿ(ಗಾಡಾ) ಇಟ್ಟಲ್ಲೇ ವ್ಯಾಪಾರ, ಇದು ಬಂಕಾಪುರ ಪಟ್ಟಣದ ಅವ್ಯವಸ್ಥೆ. ಇಲ್ಲಿ ರಸ್ತೆ ಸುಗಮ ಸಂಚಾರ ಅನ್ನುವುದು ಮರೀಚಿಕೆಯಾಗಿದೆ.
ಬಂಕಾಪುರ ಪಟ್ಟಣದ ಮಧ್ಯೆದಲ್ಲಿ ಕಾರವಾರ-ಇಳಕಲ್ ರಸ್ತೆ ಹಾಯ್ದು ಹೋಗಿದ್ದು, ಸದಾ ವಾಹನಗಳ ದಟ್ಟಣೆ ಇರುತ್ತದೆ. ಇನ್ನು ಪಟ್ಟಣದ ಜನನಿಬೀಡ, ವಾಣಿಜ್ಯ ವಹಿವಾಟು ಹೆಚ್ಚಿರುವ ರಸ್ತೆಗಳಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರಕ್ಕೆ ದಿಟ್ಟ ಕ್ರಮಕೈಗೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ವ್ಯಾಪಾರಸ್ಥರಿಂದ ರಸ್ತೆ ಅತಿಕ್ರಮಣ: ಪಟ್ಟಣದ ಬಸ್ ನಿಲ್ದಾಣದಿಂದ ಹಳೇ ನಾಡಕಚೇರಿ ರಸ್ತೆ, ರೇಣುಕಾ ಟಾಕೀಜ್‌ನಿಂದ ಹೈಸ್ಕೂಲ್ ರಸ್ತೆವರೆಗೆ ಅಂಗಡಿ, ಗೂಡಂಗಡಿ, ಹೋಟೆಲ್, ಚಿಕನ್ ಅಂಗಡಿ, ಗ್ಯಾರೇಜ್‌ನವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಪುಟ್‌ಪಾತ್ ಹಣ್ಣು ತರಕಾರಿ ವ್ಯಾಪಾರಿಗಳು, ತಳ್ಳು ಗಾಡಿಗಳು ರಸ್ತೆ ಅತಿಕ್ರಮಿಸಿಕೊಂಡಿದ್ದಾರೆ. ಪುರಸಭೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವ್ಯವಸ್ಥಿತವಾದ ಪುಟ್‌ಪಾತ್ ಸಹ ನಿರ್ಮಿಸಿಲ್ಲ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ನಡೆದಾಡಬೇಕಿದೆ. ಇದರ ಮಧ್ಯೆ ಆಟೋಗಳ ಆಟಾಟೋಪ ವಿಪರೀತವಾಗಿ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ.
ಎಲೆಂದರಲ್ಲಿ ಪಾರ್ಕಿಂಗ್: ನಂಬರ್ ಪ್ಲೇಟ್ ಇಲ್ಲದ ವಾಹನ ಸಂಚಾರ, ಅಪ್ರಾಪ್ತರ ಬೈಕ್ ರೈಡಿಂಗ್, ಅಧಿಕ ಶಬ್ದದ ಹಾರ್ನ್, ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವ ಖಾಸಗಿ ವಾಹನ, ಆಟೋ ಬೈಕ್‌ಗಳನ್ನು ನಿಯಂತ್ರಿಸಬೇಕಾದ ಪೊಲೀಸರು ನಿರ್ಲಿಪ್ತರಾಗಿದ್ದಾರೆ. ಬಸ್ ನಿಲ್ದಾಣದಿಂದ ಶಹ ಬಜಾರ ಮುಖ್ಯ ರಸ್ತೆ, ಆಸಾರ ಸರ್ಕಲ್, ಹಳೆ ಎಮ್.ಜಿ ಬ್ಯಾಂಕ್ ರಸ್ತೆ ಉದ್ದಕ್ಕೂ ಪಾದಚಾರಿಗಳು ಭಯದಲ್ಲಿಯೇ ಸಾಗಬೇಕಾಗಿದೆ. ಪಟ್ಟಣದಲ್ಲಿ ಎಲ್ಲಿಯೂ ವಾಹನ ನಿಲ್ದಾಣ ವ್ಯವಸ್ಥೆ ಇಲ್ಲ. ಇದರಿಂದಾಗಿ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ.
ಬಹುಮಹಡಿ ಕಟ್ಟಡಗಳಿಂದ ನಿಯಮ ಉಲ್ಲಂಘನೆ: ರಾಷ್ಟ್ರೀಯ ಕಟ್ಟಡ ನಿಯಮಾವಳಿ ಪ್ರಕಾರ 15 ಮೀಟರ್ ಎತ್ತರದ ಕಟ್ಟಡಗಳ ಮುಂದೆ ಹಾಗೂ ಸುತ್ತ ನಿರ್ದಿಷ್ಟ ಪ್ರಮಾಣದ ಜಾಗ ಬಿಟ್ಟಿರಬೇಕು. ಅಲ್ಲದೆ ವಾಹನ ಪಾರ್ಕಿಂಗ್ ಜಾಗವೂ ಕಡ್ಡಾಯ ಆದರೆ, ಪಟ್ಟಣದ ಪ್ರಮುಖ ರಸ್ತೆ ಎರಡು ಬದಿ ನಿರ್ಮಾಣಗೊಂಡಿರುವ ವಾಣಿಜ್ಯ ಕಟ್ಟಡಗಳ ಮಾಲೀಕರು ಕೆಲಮಹಡಿ ಪಾರ್ಕಿಂಗ್‌ಗೆ ಮೀಸಲಿಟ್ಟಿಲ್ಲ. ತಾಲೂಕಾಡಳಿತ, ಪುರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆ ಸಮಗ್ರ ಕಾರ‌್ಯ ಯೋಜನೆ ರೂಪಿಸಿ, ಪಟ್ಟಣದ ಜನತೆಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ.
"

ಬಂಕಾಪುರ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರು ರಸ್ತೆಗೆ ಬಂದಿರುವುದರಿಂದ ಜನರ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಕುರಿತು ದೂರುಗಳು ಬಂದಿವೆ. ಪರಿಶೀಲನೆ ಮಾಡಿ ಅಂತಹ ಗೂಡಂಗಡಿಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಠಾಣಾ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ವಾಹನ ತಪಾಸಣೆ, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ ಪರವಾನಗಿ ಇಲ್ಲದ ವಾಹನಗಳಿಗೆ ದಂಡ ವಿಧಿಸುತ್ತಿದ್ದೇವೆ. ಆದರೆ, ಪಟ್ಟಣದ ಟ್ರಾಫಿಕ್ ಕುರಿತು ಹಲವು ಬಾರಿ ಪುರಸಭೆಗೆ ಮಾಹಿತಿ ನೀಡಲಾಗಿದೆ. ಅವರು ಸ್ಪಂದಿಸುತ್ತಿಲ್ಲ. ಪುರಸಭೆ ಅಧಿಕಾರಿಗಳು ಪುಟ್‌ಪಾತ್ ಮೇಲಿನ ಅಂಗಡಿ, ಗಾಡಾಗಳನ್ನು ತೆರವುಗೊಳಿಸಿದರೆ ವಾಹನ ಮತ್ತು ಪಾದಚಾರಿಗಳು ಸಂಚಾರಕ್ಕೆ ಅನುಕೂಲವಾಗುತ್ತದೆ. ಪುರಸಭೆ ಅದಕ್ಕೆ ಮುಂದಾಗಬೇಕು.

"

ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ, ಎರ‌್ರಾಬಿರ‌್ರಿ ಬೈಕ್ ಚಲಾವಣೆ ನಿರಂತರವಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸುತ್ತಿಲ್ಲ. ವಾರದ ಒಳಗೆ ಸಂಚಾರ ಸಮಸ್ಯೆಗೆ ಕ್ರಮಕೈಳ್ಳದಿದ್ದಲ್ಲಿ ಸಾರ್ವಜನಿಕರ ಜತೆ ಪುರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net