

ರಾಣೆಬೆನ್ನೂರ: ಆಂಬುಲೆನ್ಸ್ ನಲ್ಲಿದ್ದ ಪಲ್ಸ್ ಮಾನಿಟರ್, ವೆಂಟಿಲೇಟರ್ ಸೇರಿ ೧ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿಯ ಸಿದ್ದೇಶ್ವರ ನಗರದ ಬಸವರಾಜ ನಾಗಪ್ಪ ಹೂಲಿಹಳ್ಳಿ (೩೫) ಹಾಗೂ ಹಾವೇರಿ ತಾಲೂಕಿನ ಯತ್ನಳ್ಳಿ ಗ್ರಾಮದ ಲಿಂಗರಾಜ ಸಿದ್ದಪ್ಪ ಮಜ್ಜಿಗೆ (೨೫) ಬಂಧಿತ ಆರೋಪಿತರು.
ಇವರಿಂದ ಆಂಬುಲೆನ್ಸ್ ನಲ್ಲಿದ್ದ ಪಲ್ಸ್ ಮಾನಿಟರ್, ವೆಂಟಿಲೇಟರ್ ಸೇರಿ ೧ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಕುಪ್ಪೇಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಂತಿದ್ದ ಆಂಬುಲೆನ್ಸ್ ಬಾಗಿಲು ಮುರಿದು ಅದರಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ, ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಹಲಗೇರಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.