ರಾಣೆಬೆನ್ನೂರು ನಗರದ ಚನ್ನೇಶ್ವರ ಮಠದಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.
Published on:
Copied
Follow Us
ರಾಣೆಬೆನ್ನೂರು: ಆಷಾಢ ಮಾಸದ ನಿಮಿತ್ತ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಭಾನುವಾರ ನಗರದ ಚನ್ನೇಶ್ವರ ಮಠಕ್ಕೆ ಆಗಮಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ವೇದಮಂತ್ರಗಳ ೋಷ, ಶಿವನಾಮ ಸ್ಮರಣೆ ಮೊಳಗಿದವು. ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಜಗದ್ಗುರುಗಳು ಇಷ್ಟಲಿಂಗಕ್ಕೆ ಅಭಿಷೇಕ, ಅರ್ಚನೆ ಹಾಗೂ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಿ, ಸಮಾಜದ ಶಾಂತಿ, ಸೌಹಾರ್ದ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಆಶೀರ್ವಚನ ನೀಡಿದ ಅವರು, ಆಷಾಢ ಮಾಸವು ಆಧ್ಯಾತ್ಮಿಕ ಸಾಧನೆ, ಆತ್ಮಾವಲೋಕನ ಮತ್ತು ಶಿವಭಕ್ತಿಯನ್ನು ವೃದ್ಧಿಸುವ ಪವಿತ್ರ ಕಾಲವಾಗಿದೆ. ಪ್ರತಿಯೊಬ್ಬರೂ ಇಷ್ಟಲಿಂಗದ ಆರಾಧನೆಯ ಮೂಲಕ ಜೀವನದಲ್ಲಿ ಸತ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಕ್ತಿ, ಸೇವೆ ಹಾಗೂ ಸದಾಚಾರದಿಂದ ಕೂಡಿದ ಬದುಕು ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದರು.
ಮಾನವನ ಜೀವನದಲ್ಲಿ ಧರ್ಮ, ಸಂಸ್ಕಾರ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಪ್ರತಿಪಾದಿಸಿದ ಅವರು, ಯುವಜನತೆ ಭಾರತೀಯ ಸಂಸ್ಕೃತಿ ಹಾಗೂ ಗುರುಪರಂಪರೆಯ ಮೌಲ್ಯಗಳನ್ನು ಅರಿತು ಅನುಸರಿಸುವ ಅಗತ್ಯವಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಕಾರ ಮತ್ತು ಸಹೋದರತ್ವದ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಸಾಧ್ಯ ಎಂದರು.
ಯುವಜನಾಂಗಕ್ಕೆ ವೀರಶೈವ ಲಿಂಗಾಯತ ಧರ್ಮದ ಆಚರಣೆ, ಇತಿಹಾಸ, ಧಾರ್ಮಿಕ ಪರಂಪರೆ ತಿಳಿಸಿಕೊಡುವ ಕೆಲಸ ಆಗಬೇಕು. ಇಷ್ಟಲಿಂಗವನ್ನು ದೇಹದಲ್ಲಿ ಧರಿಸಿ ಉಪಾಸನೆ ಮಾಡುವುದೇ ವೀರಶೈವತ್ವದ ಮೂಲ ಸಿದ್ಧಾಂತ. ಮಾನವನ ಆಧ್ಯಾತ್ಮಿಕ ಜೀವನದ ಲಕ್ಷಣವೇ ಶಿವನ ಸಾಕ್ಷಾತ್ಕಾರ ಎಂದರು.
ವೀರಶೈವ ಲಿಂಗಾಯತ ಧರ್ಮ ಇಂದು-ನಿನ್ನೆ ಹುಟ್ಟಿದ್ದಲ್ಲ. ಅದು ಯುಗ ಯಗಾಂತರಗಳಿಂದ ಬಂದಿದೆ. ವೀರಶೈವ ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆ ಬಹು ಪ್ರಾಚೀನವಾದುದು. ಹರಪ್ಪ ಮೊಹೆಂಜೊದಾರೋ ಸಂಸ್ಕೃತಿಯ ಉತ್ಖನನದಲ್ಲಿ ಶಿವಲಿಂಗಗಳ ಜತೆಗೆ ಧಾರಣೆಗೆ ಅನುಕೂಲವಾದ ಚಿಕ್ಕ ಗಾತ್ರದ ಲಿಂಗಗಳೂ ದೊರೆತಿವೆ. ಸಿಂಧೂ ಬಯಲಿನ ನಾಗರಿಕತೆಯ ಕಾಲಟ್ಟದಿಂದಲೂ ವೀರಶೈವ ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆಗೆ ಅನುಗುಣವಾದ ಇಷ್ಟಲಿಂಗದ ಆಚರಣೆ ಇತ್ತು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದರು.