ಅಕ್ರಮ‌ ಮದ್ಯ ತಡೆಯಲು ಆಗ್ರಹ; ರೈತರ ಪ್ರತಿಭಟನೆ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರು: ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧ, ಮದ್ಯ ಸೇವನೆ ವಯೋಮಿತಿ ಕಾಯ್ದೆ ಉಲ್ಲಂಘನೆ, ಸರ್ಕಾರ ನಿಗದಿಪಡಿಸಿದ ವೇಳಾಪಟ್ಟಿ ಪಾಲಸದಿರುವುದನ್ನು ಖಂಡಿಸಿ ಸಾರ್ವಜನಿಕರು ಅಬಕಾರಿ ನಿರೀಕ್ಷಕ ಮಲ್ಲಪ್ಪ ಎಕ್ಕಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಅಶಾಂತಿ ಸೃಷ್ಟಿಯಾಗಿದೆ. ತಾಲೂಕು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ೮೫% ರಷ್ಟು ಕುಟುಂಬಗಳು ಕೃಷಿ ಚಟುವಟಿಕೆಯನ್ನೇ ಅವಲಂಬಿಸಿವೆ. ದಿನನಿತ್ಯದ ಉಪಜೀವನಕ್ಕಾಗಿ ಕಟ್ಟಡ ನಿರ್ಮಾಣ, ಹಮಾಲಿ ಕೆಲಸ, ಹೊಟೇಲ್ ಕೆಲಸ, ಗಾರ್ಮೆಂಟ್ಸ್, ಇಟ್ಟಿಗೆ ಭಟ್ಟಿ, ರಸ್ತೆ ನಿರ್ಮಾಣ ಮುಂತಾದ ಶ್ರಮದಾಯಕ ಕೆಲಸಗಳಲ್ಲಿ ತೊಡಗಿರುವಂತಹ ಕುಟುಂಬಗಳಾಗಿವೆ. ತಾಲೂಕಿನಾದ್ಯಂತ ಸುಮಾರು ೧೦೦ ಹೆಚ್ಚು ಮದ್ಯದ ಅಂಗಡಿಗಳಿವೆ. ಹೀಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಬೀಡಿ ಅಂಗಡಿ, ಕಿರಾಣಿ ಅಂಗಡಿ, ಚಹಾದ ಅಂಗಡಿ, ಎಗ್ಗರೈಸ್ ಸೆಂಟರ್ ಮುಂತಾದವುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಇದರಿಂದ ಸುಲಭವಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಸಿಗುವುದರಿಂದ ಬೆಳಗ್ಗೆ ೬ಕ್ಕೆ ಮದ್ಯ ಸೇವನೆ ಮಾಡಿ ಯಾವುದೇ ಕೆಲಸ ಕಾರ್ಯಗಳಿಗೆ ಹೋಗದೆ ಹಾದಿ ಬೀದಿಯಲ್ಲಿ ಜಗಳವಾಡುತ್ತಾ ಅನೇಕ ದುರ್ಘಟನೆಗಳಿಗೆ ಕಾರಣವಾಗಿ ಗ್ರಾಮೀಣ ಬದುಕಿಗೆ ಅಕ್ರಮ ಮಧ್ಯ ಮಾರಾಟ ಕೊಳ್ಳೆ ಇಟ್ಟಂತಾಗಿದೆ. ಸರ್ಕಾರ ಇನ್ನು ಮುಂದೆ ಮದ್ಯ ಮಾರಾಟಕ್ಕೆ ಹೊಸ ಅರ್ಜಿ ಕರೆದು ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ರಾಜ್ಯ ಅಬಕಾರಿ ಕಾಯ್ದೆ ಉಲ್ಲಂಘನೆ ಮಾಡುವ ಮದ್ಯ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಹರಿಹರಗೌಡ ಪಾಟೀಲ, ಜಗದೀಶ್ ಕೆರೊಡಿ, ನಿತ್ಯಾನಂದ ಕುಂದಾಪುರ, ನಾಗರಾಜ್ ಅಂಬಲಿಯವರ, ಚಂದ್ರಪ್ಪ ಬಣಕಾರ, ಮಾರುತಿ ದೊಡ್ಡಮನಿ, ಚಂದ್ರಮ್ಮ ಮಾಗನೂರು, ರಂಗಮ್ಮ ಜಾಡರ, ರತ್ನಮ್ಮ ಮಾಕಾನೂರು, ಅಂಬಕ್ಕ ಜಾಡರ, ಶೋಭಾ ಗುಡದಳ್ಳಿ, ಶಾರದಾ ದೊಡ್ಡಮನಿ, ಹಾಲೇಶ್ ಕೆಂಚನಾಯ್ಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net