ಹಾನಗಲ್ಲ ತಾಲೂಕಿನ ಚಿಕ್ಕಾಂಶಿಹೊಸೂರು ಗ್ರಾಮದಲ್ಲಿ ಕಳವು ನಡೆದ ಶಾರದಾ ಜ್ಯುವೆಲರಿ ಶಾಪ್ನಲ್ಲಿ (stolen gold jewelry locker)ಬೆರಳಚ್ಚು ತಜ್ಞರು, ಶ್ವಾನದಳ ತಂಡ ಪರಿಶೀಲನೆ ನಡೆಸಿತು.
ಹಾನಗಲ್ಲ: ಬಂಗಾರದ ಅಂಗಡಿ ಶೆಟರ್ಸ್ ಹಾಗೂ ಕಬ್ಬಿಣದ ಸರಳಿನ ಬಾಗಿಲನ್ನು ಕತ್ತರಿಸಿ, ಚಿನ್ನದ ಮತ್ತು ಬೆಳ್ಳಿ ಆಭರಣಗಳಿದ್ದ ಲಾಕರ್ (stolen gold jewelry locker) ಅನ್ನೇ ಹೊತ್ತೊಯ್ದ ಘಟನೆ ಶನಿವಾರ ಬೆಳಗಿನ ಜಾವ ತಾಲೂಕಿನ ಚಿಕ್ಕಾಂಶಿಹೊಸೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸ್ ನಿಲ್ದಾಣದ ಎದುರಿನಲ್ಲಿರುವ ಅಣ್ಣಪ್ಪ ಭಜಂತ್ರಿ ಅವರಿಗೆ ಸೇರಿದ ಶಾರದಾ ಜುವೆಲರಿ ಶಾಪ್ನಲ್ಲಿ ಕಳವು ಕೃತ್ಯ ನಡೆದಿದೆ. ಎಂದಿನಂತೆ ಶನಿವಾರ ಬೆಳಗ್ಗೆ ಅಂಗಡಿ ಸ್ವಚ್ಛಗೊಳಿಸಲು ಮಾಲೀಕ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದೆ.
ಮುಖಕ್ಕೆ ಮಾಸ್ಕ್ ಧರಿಸಿ ಬಂದ ಎಂಟು ಕಳ್ಳರಿದ್ದ ತಂಡ, ಪಕ್ಕದ ಕಿರಾಣಿ ಅಂಗಡಿಯ ಮೀಟರ್ನಿಂದ ವಿದ್ಯುತ್ ಸಂಪರ್ಕ ಬಳಸಿ, ಕಟರ್ ಯಂತ್ರದ ಮೂಲಕ ಜ್ಯುವೆಲರಿ ಅಂಗಡಿ ಬಾಗಿಲು ಹಾಗೂ ಕೀಲಿ ಕತ್ತರಿ ಅಂಗಡಿ ಪ್ರವೇಶಿಸಿದೆ. ಆಭರಣಗಳಿದ್ದ ಲಾಕರ್ ತೆರೆಯಲು ಕಳ್ಳರು ಯತ್ನಿಸಿದ್ದಾರೆ. ಆದರೆ, ತೆರೆಯುವುದು ತಡವಾಗಿದ್ದರಿಂದ ಲಾಕರ್ ಅನ್ನೇ ಹೊತ್ತೊಯ್ದಿದ್ದಾರೆ. ಕಳ್ಳರ ತಂಡವು ಪಿಕಪ್ ವಾಹನದಲ್ಲಿ ಲಾಕರ್ ಅನ್ನು ಸಾಗಿಸಿದ್ದಾರೆ.
ಜುವೆಲರಿ ಅಂಗಡಿ ಪಕ್ಕದಲ್ಲಿ ಹೊಟೇಲ್ ಹಾಗೂ ಬೇಕರಿಗಳಿವೆ. ಪ್ರತಿದಿನ ರಾತ್ರಿ ಇಬ್ಬರು ಅಂಗಡಿಯಲ್ಲಿ ಮಲಗಿರುತ್ತಾರೆ. ಅವರು ಹೊರಬರಬಾರದೆಂದು ಎರಡು ಅಂಗಡಿ ಬಾಗಿಲಿಗೆ ಕಬ್ಬಿಣದ ರಾಡ್ ಬಳಸಿ ಲಾಕ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬಂಗಾರದ ಅಂಗಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಅಂಗಡಿಗಳ ಸಿಸಿ ಕ್ಯಾಮರಾಗಳನ್ನು ಕಳ್ಳರು ಹಾಳು ಮಾಡಿದ್ದಾರೆ. ಆದರೆ, ಒಂದು ಸಿಸಿ ಕ್ಯಾಮರಾದಲ್ಲಿ ಕಳ್ಳರ ಎಲ್ಲ ಚಲನವಲನ ದಾಖಲಾಗಿದೆ.
ಲಾಕರ್ನಲ್ಲಿ 80 ಲಕ್ಷ ರೂಪಾಯಿ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳಿದ್ದವು ಎನ್ನಲಾಗಿದೆ. ಕೆಲ ತಿಂಗಳು ಹಿಂದೆ ಇದೇ ಶಾರದಾ ಜ್ಯುವೆಲರಿ ಅಂಗಡಿಯಲ್ಲಿ ಎರಡು ಬಾರಿ ಕಳ್ಳತನಕ್ಕೆ ಯತ್ನ ನಡೆದಿತ್ತು.
ಘಟನಾ ಸ್ಥಳಕ್ಕೆ ಹಾನಗಲ್ಲ ಪಿಎಸ್ಐ ಸಂಪತ್ಕುಮಾರ ಆನಿಕಿವಿ, ವೃತ್ತ ನಿರೀಕ್ಷಕ ಬಸವರಾಜ ಹಳಬಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬೆರಳಚ್ಚು ತಜ್ಞರು, ಶ್ವಾನದಳ ತಂಡ ಪರಿಶೀಲನೆ ನಡೆಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹಾವೇರಿ ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕ ಎಲ್.ವೈ. ಶಿರಕೋಳ, ಶಿಗ್ಗಾವಿ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.