ಹಾವೇರಿ: ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿ, ವಿಭಿನ್ನ ಕಥಾಹಂದರದಿಂದ ಕಡಿಮೆ ಅವಧಿಯಲ್ಲಿಯೇ ‘ರಾಣಿ’ ಧಾರಾವಾಹಿ ಪ್ರೇಕ್ಷಕರ ಮನಗೆದ್ದಿದೆ. ಇದೀಗ ಧಾರಾವಾಹಿ ತಂಡವು ಕೇವಲ ತೆರೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಮಾದರಿಯಾಗಿದೆ. ಹೌದು, ಸದ್ಯ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳ ಸಿದ್ಧತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ರಾಣಿ’ ಧಾರಾವಾಹಿ ತಂಡವು ಹಾವೇರಿ ಜಿಲ್ಲೆಯ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಕಿರು ಉಡುಗೊರೆ ನೀಡಿ, ಸ್ಫೂರ್ತಿ ತುಂಬಿದೆ. ಮಕ್ಕಳ ಓದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದಾಜು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾಮಿಟ್ರಿ ಬಾಕ್ಸ್‌ಗಳನ್ನು ಉಡುಗೊರೆಯಾಗಿ ವಿತರಿಸಲಾಗಿದೆ. ಪ್ರಸ್ತುತ ಧಾರಾವಾಹಿಯಲ್ಲಿ ನಾಯಕಿ ರಾಣಿಗೂ ಓದಿನ ಬಗ್ಗೆ ವಿಶೇಷ ಒಲವು ಮೂಡಿದ್ದು, ಆಕೆಯೂ ಪರೀಕ್ಷೆ ಬರೆಯುವ ಉಮೇದಿನಲ್ಲಿದ್ದಾಳೆ. ಧಾರಾವಾಹಿಯ ಈ ಆಶಯವನ್ನು ನಿಜ ಜೀವನದ ಮಕ್ಕಳಿಗೂ ತಲುಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಓದಿನ ಮಹತ್ವ ಅರಿತಿರುವ ರಾಣಿಯ ಈ ನಡೆಯಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹರ್ಷವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದ ಕನಸುಗಳು ಮತ್ತು ಹಂಬಲದ ಕಥೆಯನ್ನು ಹೊಂದಿರುವ ‘ರಾಣಿ’ ಧಾರಾವಾಹಿ ಪ್ರತಿದಿನ ಸಂಜೆ 6ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿದೆ.