ತಾಲೂಕಿಗೆ ಒಂದೇ ಮಣ್ಣು ಪರೀಕ್ಷೆ ವಾಹನವಿದ್ದು, ವರ್ಷಕ್ಕೆ 1200 ಮಾದರಿ ಪರೀಕ್ಷಿಸಬಹುದಾಗಿದೆ. ಆದರೆ, 46 ಸಾವಿರ ಹೆಕ್ಟೇರ್ ಭೂಮಿಯ 38 ಸಾವಿರ ರೈತರನ್ನು ತಲುಪುವುದು ಯಾವಾಗ ಎಂಬ ಪ್ರಶ್ನೆ ಇದೆ. ಈಗಿರುವ ತಾಲೂಕಿನಲ್ಲಿನ ಒಂದೇ ಕೃಷಿ ಸಂಜೀವಿನಿ ವಾಹನವು ಅಧಿಕಾರಿಗಳ ಕೃಷಿ ಕ್ಷೇತ್ರ ಭೇಟಿಗೆ, ಧರತಿ ಮಾತಾ ಬಚಾವೋ ಆಂದೋಲನ ಸೇರಿದಂತೆ ಪ್ರಚಾರಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇಲಾಖೆ ನೀಡಿದ ಗುರಿ ತಲುಪಿ ಅಲ್ಲಿಗೆ ಮಣ್ಣು ಪರೀಕ್ಷೆ ನಿಲ್ಲಿಸಲಾಗುತ್ತದೆ. ಹೀಗಾಗಿ, ಭೂಗುಣ ಆಧರಿಸಿ ಪೋಷಕಾಂಶಗಳನ್ನು ಹಾಕಬೇಕೆಂಬ ಯೋಜನೆ ಸಾಕಾರವಾಗಲು ಮೂರೂ ಹೋಬಳಿಗೆ ಒಂದರಂತೆ ಇನ್ನೂ ಎರಡು ಕೃಷಿ ಸಂಜೀವಿನಿ ವಾಹನ ಬೇಕಾಗಿವೆ. ವಾಹನದ ಜತೆಗೆ ಸಾಕಷ್ಟು ಸಿಬ್ಬಂದಿ, ಅಗತ್ಯ ಸಾಮಗ್ರಿ ನೀಡಿದರೆ, ಮಾತ್ರ ಈ ಯೋಜನೆ ಸಫಲವಾಗಬಲ್ಲದು.