

ಹಾನಗಲ್ಲ: ನಗರದ ವಿನಸ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಇಟ್ಟಿದ್ದ 3 ಲಕ್ಷ ರೂ. ಎಫ್ಡಿ ಹಾಗೂ 70 ಸಾವಿರ ರೂ. ಆರ್.ಡಿ. ಹಣ ವಾಪಸ್ ಕೊಡದೆ ಗ್ರಾಹಕನಿಗೆ ಮೋಸ ಮಾಡಿರುವ ಕುರಿತು ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದ ವಿಜಯಕುಮಾರ ಸಿದ್ದಪ್ಪ ಸಿರಿಗೆರೆ ಹಾಗೂ 19 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಮೋಸ ಹೋಗಿರುವ ಪಟ್ಟಣದ ಮಹ್ಮದಿ ಇಬ್ರಾಹಿಂ ನಾಶಿಪುಡಿ ಎಂಬುವರು ದೂರು ದಾಖಲಿಸಿದ್ದಾರೆ. ಆರೋಪಿತರು ನಗರದ ವಿನಸ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ನಾನು ಹಣ ಹೂಡಿಕೆ ಮಾಡಿದ್ದೇನೆ. ಹೂಡಿಕೆ ಮಾಡಿದ ಹಣದ ಮೇಲೆ ಸಾಲ ತೆಗೆದುಕೊಳ್ಳುವ ಸಲುವಾಗಿ ಹೋದಾಗ ಕಚೇರಿ ಬಂದ್ ಆಗಿತ್ತು. ಆದ್ದರಿಂದ ದಾವಣಗೆರೆಯಲ್ಲಿರುವ ಮುಖ್ಯ ಕಚೇರಿಗೆ ತೆರಳಿ ವಿಚಾರಿಸಿದಾಗ, ಹಾನಗಲ್ಲನ ಸೊಸೈಟಿಯಲ್ಲಿನ ಯಾವ ಹಣವನ್ನು ಕೊಡಲು ಬರುವುದಿಲ್ಲ ಎಂದು ಹೇಳಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.