

ರಾಣೆಬೆನ್ನೂರು: ಇಲ್ಲಿಯ ವಾಗೀಶ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ಒಂದು ತಿಂಗಳ ಕಾಲ ನಡೆದ ಶ್ರೀ ಸಿದ್ಧಾರೂಢರ ಮಹಾತ್ಮೆ ಪ್ರವಚನದ ಮಂಗಲ ಕಾರ್ಯಕ್ರಮ ಜೂ. 15ರಂದು ಜರುಗಲಿದೆ ಎಂದು ಜೋಡಕುರುಳಿ ಚಿದ್ಘಾನಾನಂದ ಭಾರತಿ ಸ್ವಾಮೀಜಿ ತಿಳಿಸಿದರು.
ದೇವಸ್ಥಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ವೀರಭದ್ರ ಸ್ವಾಮಿ ಹಾಗೂ ಸಿದ್ಧಾರೂಢ ಸ್ವಾಮೀಜಿಯವರ ಪಾದುಕೆಗಳ ಅಭಿಷೇಕ, ಬಿಲ್ವಾರ್ಚನೆ ಕಾರ್ಯಕ್ರಮ ಜರುಗುವುದು. ಮಧ್ಯಾಹ್ನ 3ರಂದು ಚೌಡೇಶ್ವರಿ ದೇವಿ ದೇವಸ್ಥಾನ ವೀರಭದ್ರ ದೇವರ ಪಲ್ಲಕ್ಕಿ ಉತ್ಸವ, ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಆನೆ ಆಂಬಾರಿ ಉತ್ಸವ, ಮುಪ್ಪಿನಾರ್ಯ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ಜರುಗಲಿದೆ.
ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಾರೂಢ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ಕೈಲಾಸ ಮಂಟಪ ನಿಮಿರ್ಸಿ ಪೂಜೆ ಮಾಡಲಾಗುವುದು ಎಂದು ತಿಳಿಸಿದರು.
ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ರಾಜಣ್ಣ ಮೋಟಗಿ, ಜಿ.ಜಿ. ಹೊಟ್ಟಿಗೌಡ್ರ, ಬಾಬಣ್ಣ ಶೆಟ್ಟರ್, ನಾಗರಾಜ ಮುಂಡಾಸದ, ಪಿ.ಆರ್. ಮಂಜುನಾಥ, ಪವನಕುಮಾರ ಪಟ್ಟಣಶೆಟ್ಟಿ, ಆದರ್ಶ ಅಂಗಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.