

ಹಾವೇರಿ:
ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳಿಂದ ಸಾರ್ವಜನಿಕ ಆಸ್ಪತ್ರೆಯ ಮಲಗುಂಡಿಯನ್ನು ಕೈಯಿಂದ ಸ್ವಚ್ಛಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸವಣೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಂಕರ ಹಿರೇಗೌಡರ ಹಾಗೂ ಹಿರಿಯ ಶುಶೂಷಾಧಿಕಾರಿ ವನಿತಾ ಕುರುಂದವಾಡ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಸೋಮವಾರ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 28ರಂದು ಚಿಕಿತ್ಸೆಗೆಂದು ಸವಣೂರು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದ ಇಬ್ಬರು ರೋಗಿಗಳಿಂದ ಆಸ್ಪತ್ರೆಯ ಮಲಗುಂಡಿಯನ್ನು ಕೈಯಿಂದ ಸ್ವಚ್ಛಗೊಳಿಸಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಹಿರಿಯ ಶುಶೂಷಾಧಿಕಾರಿ ವನಿತಾ ಕುರುಂದವಾಡ ಅವರು ತಮಗೆ ಪರಿಚಯವಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಆಸ್ಪತ್ರೆಯ ಮಲಗುಂಡಿಯನ್ನು ಕೈಯಿಂದ ಸ್ವಚ್ಛಗೊಳಿಸಲು ಸೂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಆಸ್ಪತ್ರೆಯಲ್ಲಿ ಇಂತಹ ಕಾನೂನುಬಾಹಿರ ಘಟನೆ ನಡೆಯಲು ಆಡಳಿತ ವೈದ್ಯಾಧಿಕಾರಿ ಡಾ. ಶಂಕರ ಹಿರೇಗೌಡರ ಅವರ ಕರ್ತವ್ಯಲೋಪವೂ ಕಾರಣವಾಗಿದೆ ಎಂದು ಪರಿಗಣಿಸಲಾಗಿದೆ.
*ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲು*
ಘಟನೆಗೆ ಸಂಬಂಧಿಸಿದಂತೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೈಯಿಂದ ಮಲಮೂತ್ರವನ್ನು ತೆಗೆಸುವುದನ್ನು ನಿಷೇಧಿಸಿರುವ ಕಾನೂನು ಹಾಗೂ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.