Bus break fail ಬ್ರೇಕ್ ಫೇಲ್ ಆಗಿ ಕಾಲುವೆಗೆ ಇಳಿದ ಶಾಲಾ ಬಸ್

ಸವಣೂರು ತಾಲೂಕಿನ ಮಂತ್ರೋಡಿ-ಗುಂಡೂರ ಮಾರ್ಗದಲ್ಲಿ ಬ್ರೇಕ್ ಫೇಲ್ ಆಗಿ (Bus break fail) ಕಾಲುವೆಗೆ ಇಳಿದ ಖಾಸಗಿ ಶಾಲೆಯ ಬಸ್.
ಸವಣೂರು ತಾಲೂಕಿನ ಮಂತ್ರೋಡಿ-ಗುಂಡೂರ ಮಾರ್ಗದಲ್ಲಿ ಬ್ರೇಕ್ ಫೇಲ್ ಆಗಿ (Bus break fail) ಕಾಲುವೆಗೆ ಇಳಿದ ಖಾಸಗಿ ಶಾಲೆಯ ಬಸ್.
Published on
ಸವಣೂರು: ಖಾಸಗಿ ಶಾಲೆಯ ಬಸ್ ಬ್ರೇಕ್ ಫೇಲ್ ಆಗಿ (Bus break fail), ರಸ್ತೆಯ ಪಕ್ಕದ ಕಾಲುವೆಗೆ ಇಳಿದು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ತಾಲೂಕಿನ ಮಂತ್ರೋಡಿ-ಗುಂಡೂರ ಬಳಿ ಸೋಮವಾರ ಸಂಭವಿಸಿದೆ.
ಸವಣೂರು ಪಟ್ಟಣದ ಐ.ಎಸ್. ಮರೋಳ ಶಾಲೆಯ ಬಸ್ ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ತಾಲೂಕಿನ ಮಂತ್ರೋಡಿಯಿಂದ ಗುಂಡೂರ ಮಾರ್ಗವಾಗಿ ಬರುತ್ತಿತ್ತು. ಬಸ್ ಗುಂಡೂರ ಗ್ರಾಮದ ಹೊರವಲಯದ ರಸ್ತೆಯ ತಿರುವಿನಲ್ಲಿ ಸಾಗುತ್ತಿದ್ದಾಗ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಬಸ್ ರಸ್ತೆ ಪಕ್ಕದ ಕಾಲುವೆಗೆ ಇಳಿದು, ನಂತರ ಬಲಬದಿ ಕಾಲುವೆಯ ದಿಬ್ಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ ಕಿಟಕಿಯ ಸರಳುಗಳು ಬಡಿದು ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಬಸ್ ಅವಘಡದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂತ್ರೋಡಿ ಗ್ರಾಮಸ್ಥರು ಹಾಗೂ ಪಾಲಕರು, ತಮ್ಮ ಮಕ್ಕಳನ್ನು ಬಸ್​ನಿಂದ ಕೆಳಗೆ ಇಳಿಸಿಕೊಂಡು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಸ್​ಗೆ ಮಕ್ಕಳನ್ನು ಹತ್ತಿಸಲು ಹಾಗೂ ಇಳಿಸಲು ಸಿಬ್ಬಂದಿ ಇರುವುದಿಲ್ಲ. ಈ ಹಿಂದೆ ಬಸ್ ಹತ್ತುವ ಸಮಯದಲ್ಲಿ ಮಗು ಬಿದ್ದಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಶಾಲಾ ಆಡಳಿತಕ್ಕೆ ತಿಳಿಸಿದರೂ, ಸೂಕ್ತ ಕ್ರಮ ವಹಿಸಿಲ್ಲ. ಶಾಲೆಗೆ ಹಣ ಮಾತ್ರ ಬೇಕು, ಮಕ್ಕಳ ಜೀವ ಬೇಡವೇ ಎಂದು ಪಾಲಕರು ಆಕ್ರೋಶ ಹೊರಹಾಕಿದರು.
ಹಳೇ ಬಸ್ ಅನ್ನು ಶಾಲಾ ಮಕ್ಕಳನ್ನು ಕರೆದೊಯ್ಯಲು ಬಳಸುತ್ತಾರೆ. ಹೀಗಾಗಿ, ಬಸ್ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು. ಇನ್ನಾದರೂ ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಬಸ್ ಅನ್ನು ನಿಧಾನವಾಗಿ ಚಲಾಯಿಸಬೇಕು. ಬಸ್​ಗೆ ಮಕ್ಕಳನ್ನು ಹತ್ತಿಸಲು ಹಾಗೂ ಇಳಿಸಲು ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net