ಸತತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ

ಸವಣೂರ ತಾಲೂಕು ಚಿಲ್ಲೂರಬಡ್ನಿ ಗ್ರಾಮದ ಪಿಎಂ ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಭದ್ರಾವತಿಯ ಡಿಎಸ್‌ಪಿ ಪ್ರಕಾಶ ರಾಥೋಡ್ ಮಾತನಾಡಿದರು. ವೇ.ಮೂ ನಾಗಯ್ಯ ಹಿರೇಮಠ, ವೆಂಕಟೇಶ ಲಮಾಣಿ, ಗಂಗಾಧರಯ್ಯ ಕಲ್ಮಠ ಇತರರಿದ್ದರು.
ಸವಣೂರ ತಾಲೂಕು ಚಿಲ್ಲೂರಬಡ್ನಿ ಗ್ರಾಮದ ಪಿಎಂ ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಭದ್ರಾವತಿಯ ಡಿಎಸ್‌ಪಿ ಪ್ರಕಾಶ ರಾಥೋಡ್ ಮಾತನಾಡಿದರು. ವೇ.ಮೂ ನಾಗಯ್ಯ ಹಿರೇಮಠ, ವೆಂಕಟೇಶ ಲಮಾಣಿ, ಗಂಗಾಧರಯ್ಯ ಕಲ್ಮಠ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಸವಣೂರ
ಜೀವನದಲ್ಲಿ ಸೋತರೂ ಎದೆಗುಂದದೆ ಆ ಸೋಲಿನಿಂದ ಪಾಠ ಕಲಿತು ಸತತ ಪ್ರಯತ್ನದೊಂದಿಗೆ ಮುನ್ನುಗ್ಗಿ ಗುರಿ ಮುಟ್ಟಬೇಕು ಎಂದು ಭದ್ರಾವತಿ ಡಿಎಸ್‌ಪಿ ಪ್ರಕಾಶ ರಾಥೋಡ ಹೇಳಿದರು.
ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದ ಪಿಎಂ ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ತಾಯಿಯ ಪ್ರೀತಿ, ತಂದೆಯ ಗದರುವಿಕೆ ಹಾಗೂ ಗುರುಗಳ ಶಿಸ್ತಿನ ಶಿಕ್ಷಣ ಕ್ರಮದಿಂದ ಮಕ್ಕಳು ಬೆಳೆಯಬೇಕು. ಅಂದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾವು ಕಲಿಯುವ ಸಂದರ್ಭದಲ್ಲಿ ಸ್ಕೌಟ್ ಶಿಕ್ಷಕರಾಗಿದ್ದ ವೈ.ಎಸ್. ಕುತನಿ ಹಾಗೂ ಇತರ ಶಿಕ್ಷಕರು ಉತ್ತಮವಾಗಿ ಬೋಧಿಸಿದ್ದರಿಂದ ಗುಣಮಟ್ಟದ ಶಿಕ್ಷಣ ಪಡೆದು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಸರ್ಕಾರಿ ಶಾಲೆಗಳಿಗೆ ಸಹಾಯ, ಶಿಕ್ಷಕರಿಗೆ ಸಹಕಾರ ನೀಡಿದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಆದ್ದರಿಂದ, ಚಿಲ್ಲೂರಬಡ್ನಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳ ದತ್ತಿ ನಿಧಿಯನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತಾಯಿ ಹೆಸರಲ್ಲಿ ನೀಡುವೆ ಎಂದು ತಿಳಿಸಿದರು.
ವೇ.ಮೂ ನಾಗಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳಾದ ಭೀಮಣ್ಣ ಲಕ್ಕುಂಡಿ, ಮುತ್ತಪ್ಪ ತುರಬಿ, ರೇಣುಕಾ ಧಾರವಾಡ, ಮಂಜವ್ವ ಗೇಡಿ, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸಿ.ಎ. ಬೊಮ್ಮಕ್ಕನವರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ ಚಳ್ಳಾಳ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಕೆ. ಪಾಟೀಲ, ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಎಂ.ಸಿ. ಕಳ್ಳಿಮಠ, ಡಿ.ಎಫ್. ಹರಿಜನ, ಜೆ.ಎನ್. ದೊಡ್ಡಮನಿ, ಎಸ್.ವಿ. ಗುತ್ತಲ, ಎನ್.ಆರ್. ಈಳಿಗೇರ, ಮುಖ್ಯಗುರು ಬಸವರಾಜ ಮಾಳಗಿ, ಎನ್.ಎಸ್. ಹಿರೇಮಠ ಇತರರಿದ್ದರು.
ಶಿಕ್ಷಕರಾದ ವಿದ್ಯಾಧರ ಕುತನಿ, ವೀಣಾ ಕಹಾರ, ಮಾಧುರಿ ಮುಳುಗುಂದ, ಅಮೃತ ಕಲಕಣಿ ಕಾರ್ಯಕ್ರಮ ನಿರ್ವಹಿಸಿದರು. ನಂತರ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗಣ್ಯರಿಗೆ ಸನ್ಮಾನ
ಸಾಮಾಜಿಕ ಕಾರ್ಯಕರ್ತರಾದ ವೆಂಕಟೇಶ ಲಮಾಣಿ, ಗಂಗಾಧರಯ್ಯ ಕಲ್ಮಠ, ಖಾದರಸಾಬ್ ನದಾಫ, ಅಶೋಕ ವಗ್ಗನವರ, ನಾಗಪ್ಪ ವಗ್ಗನವರ, ಯಲ್ಲಪ್ಪ ಕನಕಣ್ಣವರ, ಅಣ್ಣಪ್ಪ ಅಂಗಡಿ, ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿ, ಪದೋನ್ನತಿ ಹೊಂದಿದ ಡಾ. ಪ್ರದೀಪ ರಾಥೋಡ, ವರ್ಗಾವಣೆಗೊಂಡ ಆನಂದ ದೇಸಾಯಿ ಹಾಗೂ ಒಂದೇ ವರ್ಷದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ ಡಿಎಸ್‌ಪಿ ಪ್ರಕಾಶ ರಾಥೋಡ್ ಅವರನ್ನು ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮತ್ತು ಗ್ರಾಮಸ್ಥರು ಸನ್ಮಾನಿಸಿ, ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net